ಸಮಾನರೆಲ್ಲ ಮನುಜರಿಲ್ಲಿ
ಮಹಿಳೆಯರೇ ನಿಮ್ಮನ್ನು
ನೀವೇ ಹಳಿಯದಿರಿ

ಸಮಾನತೆಯ ಕೋರೀ ಕೋರೀ
ಸಮಾನರಲ್ಲ ಎಂದು ನೀವೇ
ಜಗಕೆ ಸಾರದಿರಿ

ಸಮಾನತೆಯ ಬೇಡಿಕೆಯಲ್ಲೇ
ಸಮಾನರಲ್ಲ ಎಂಬುದಕೆ
ಸಮ್ಮತಿ ಇಹುದಲ್ಲವೇ

ಎಲ್ಲ ಒಂದೇ ಎನುವ ಭಾವ
ಇರಲು ಈ ಬೇಡಿಕೆಗಳ ನೀವು
ಮರೆಯಬಹುದಲ್ಲವೇ

ಎಲ್ಲ ರಂಗಗಳಲೂ ನಿಮಗೆ
ಮುಕ್ತ ಅವಕಾಶ ಇರಲು
ಸಾಧಸಿಯೇ ತೋರಿಸಿರಿ

ಪ್ರಸಿದ್ಧರಾದ ಮಹಿಳೆಯರೆಲ್ಲ
ಯಾವ ಮೀಸಲಾತಿಗೆ ಮೊರೆ
ಹೊಕ್ಕಿದ್ದರೆಂದು ಹೇಳಿರಿ

ಮಹಿಳೆ ಈಗ ರಾಷ್ಟ್ರಾಧ್ಯಕ್ಷೆ
ಮಹಿಳೆಯ ಆದೇಶದಂತೆ
ನಡೆಯುತಿದೆ ಸರಕಾರ

ಸಾಧನೆಗೈವವರಿಗೆ ಸದಾ
ಇಹುದು ಅವಕಾಶಗಳು
ಏಕೆ ಈ ಹಾಹಾಕಾರ

ಹೆಣ್ಣು ಮಗುವು ಜನಿಸಿದಾಗ
ಹೆಚ್ಚು ಮರುಗುವವಳು
ತಾನೂ ಒಬ್ಬ ಹೆಣ್ಣು

ಆ ಕೆಟ್ಟ ಯೋಚನೆಯೇ
ಮನದಿಂದ ತೊಲಗಿದರೆ
ಸಾಯಬೇಕಿಲ್ಲ ಹೆಣ್ಣು

ಹೆಣ್ಣೇ ಹೆಣ್ಣ ಮೆಟ್ಟಿ ನಿಂತು
ನಡೆಸಿಹಳು ಜಗದಲೆಲ್ಲ
ಸಾಕಷ್ಟು ದುರಾಚಾರ

ಹೆಣ್ಣು ಹೆಣ್ಣ ಜಯಿಸಿದರೆ
ಈ ಜಗದಿ ಇರಲಾರದು
ಇನ್ನು ಈ ಅನಾಚಾರ!
************