ಸಖೀ
ನೀನಾಗಿಯೇ ಬಹಿರಂಗ
ಪಡಿಸಿರುವ ನಮ್ಮ ಪ್ರೀತಿಯ
ನೀನೀಗ ಬಚ್ಚಿಡು-ಆದಷ್ಟು
ಮುಚ್ಚಿಡು ಎನ್ನುವೆಯಾ?
ನಾ ಹೇಗೆ ಮುಚ್ಚಿಡಲಿ?

ರಭಸದಲಿ ಮುನ್ನುಗ್ಗುತ್ತಿರುವ
ನದಿಯ ನೀರನು ನೀ ಕಟ್ಟು
ಎನ್ನುವೆಯಾ?
ನಾ ಹೇಗೆ ಕಟ್ಟಿಡಲಿ?

ಒಮ್ಮೆ, ಪಂಜರವನೇ ಒದ್ದು
ರೆಕ್ಕೆ ಬಿಚ್ಚಿ ಹಾರಿಹೋಗಿರುವ
ಹೃದಯ ಪಕ್ಷಿಯನು ಮತ್ತೆ
ಹಿಡಿದಿಡು ಎನ್ನುವೆಯಾ?
ನಾ ಹೇಗೆ ಹಿಡಿದಿಡಲಿ?

ಬಾ ಸಖೀ,
ಇಂದು ನಮ್ಮ ನಡುವಿರುವ
ಈ ಪ್ರೀತಿಗೊಂದು ಹೆಸರಿಡೋಣ,

ನಮ್ಮ ಮನದ ಆಶಯಗಳನು
ಈ ಜನರ ಸಮ್ಮುಖದಲ್ಲಿ
ಮನಬಿಚ್ಚಿ ಓದಿಬಿಡೋಣ.

ಜನರು ತಮ್ಮ ನಡುವಣ ವೈರತ್ವವನು
ಬಹಿರಂಗಪಡಿಸಿ ನೂರಾರು ಜನರ
ಮುಂದೆ ಕಾದಾಡುವುದನು
ಕಂಡಿಲ್ಲವೇ ನೀನು?

ಇನ್ನು ನಮ್ಮ ನಡುವಿರುವ
ಈ ಪ್ರೀತಿಯ ಅರಿವು ನಾಲ್ಕು
ಜನರಿಗಾದರೆ ಅದರಿಂದೇನು
ಅನಾಹುತವಾದೀತು,
ಹೇಳು ನೀನು.

ಅಳಿಯ ಬಯಸುವ
ನಮಗೇಕೆ ಹಿಂದುಳಿವ
ಜನರ ಚಿಂತೆ?
ಎದ್ದು ಬಾ ಸಖೀ
ಬಂಧನದ ಗೋಡೆಗಳ
ಒದ್ದು ಬಾ, ಸಖೀ

ಇಲ್ಲಿ ಬದುಕಿಯೂ
ಸತ್ತಿರುವುದಕ್ಕಿಂತ,
ಸತ್ತು, ನನ್ನೊಂದಿಗೆ
ಅಲ್ಲಿ ಬದುಕಲು ಬಾ.
*-*-*-*-*-*-*-*