ಅನು,

ಹೃದಯದ ಭಾವನೆಗಳಿಗೆ ಬೀಗ ಬಿದ್ದಿದೆ, ಸುಂದರ ಬದುಕಿನೊಂದಿಗೆ ಪ್ರಾರಂಭವಾಗುತ್ತಿದ್ದ ನನ್ನ ಬದುಕಿನ ಅಧ್ಯಾಯಕ್ಕೊಂದು ದೊಡ್ಡ ಅಘಾತವೇ ಆಗಿದೆ, ಒಂದೆಡೆ ನನ್ನ ನಿನ್ನ ನಡುವಿನ ಪ್ರೇಮ ಸತ್ತು ಬಿದ್ದರೆ ಮತ್ತೊಂದು ಕಡೆ ನನ್ನ ಇಡೀ ಪರಿವಾರದ ವಿರೋಧತನ, ನಿನ್ನ ಅಗಲಿಕೆ, ಇನ್ನೊಂದು ಕಡೆ ಅವರ ತಿರಸ್ಕಾರ ನನ್ನ ಇಡೀ ಬದುಕಿನ ಅಂತಃಸತ್ವವೇ ಉದುಗಿ ಹೋಗಿದೆ.

ಭಾವಲೋಕದ ಭಾವದೀವಿಗೆಯನ್ನು ಹಿಡಿದು ಪ್ರೀತಿಯ ಅರಸುವಿಕೆಯಲ್ಲಿ ತೊಳಲಾಡುತ್ತಿದ್ದ ನನಗೆ, ನಿನ್ನ ಬೊಗಸೆ ಕಣ್ಣಿನ ಪ್ರೀತಿ ನನ್ನ ಬದುಕಿಗೊಂದು ಅರ್ಥ ತಂದುಕೊಟ್ಟಿತು, ಎಲ್ಲೋ ಅನಾಮಿಕನಾಗಿ ಅಲೆದಾಡುತ್ತಿದ್ದ ನನಗೆ ಸ್ವೂರ್ತಿಯಾಗಿ ನಿಂತವಳೇ ನೀನು, ಬದುಕಿನ ನಾನಾ ಪರಿಕಲ್ಪನೆಯೊಂದಿಗೆ ಇಂದು ನನ್ನ ಗುರಿಯನ್ನು ತಲುಪಿದ್ದರ ಹಿಂದೆ ನೀನು ಎಷ್ಟು ಪ್ರಮುಖ ಪಾತ್ರ ವಹಿಸಿದ್ದೀಯ ಅಂತ ನಿನಗಷ್ಟೆ ತಿಳಿದಿಲ್ಲ.

ಜೀವನವೆಂದರೆ ಸಾವಿರ ಸಮಸ್ಯೆಗಳ ಸುಂಟರಗಾಳಿಯೆಂಬ ಜನಸಾಮಾನ್ಯರ ಮಾತುಗಳನ್ನು ಅಲ್ಲಗಳೆದು, ಜೀವನವೆಂದರೆ ಇಷ್ಟೇನಾ ಎಂಬಂತಹ ಮಜಲು ಮುಟ್ಟಿದ್ದೇನೆ, ಹೀಗೇಕಾಯಿತು ? ಉತ್ತರ ನನ್ನಲ್ಲೂ ಇಲ್ಲ, ನಿನ್ನಲ್ಲೂ ಇಲ್ಲ, ಹೀಗೆ ಯಾರಲ್ಲೂ ಇರದ ಉತ್ತರಕ್ಕಾಗಿ ಹುಡುಕಾಡಿ ದಿನವಿಡಿ ಬಸವಳಿದು ಹಿಂದಿರುಗಿದ ಆ ದಿನಗಳೆಷ್ಟೋ ? ಆ ಸರಿ ರಾತ್ರಿಗಳಲ್ಲಿ ನಿನಗಾಗಿ ಕನವರಿಸಿದ್ದೆಷ್ಟೋ ? ಹಪಸಿದ್ದೆಷ್ಟೋ ? ನಿಶ್ಚಲ ದೇಹವೊತ್ತು ಆನಾಮಿಕನಂತೆ ಬಿದ್ದು ಒಯ್ದಾಡುತ್ತಿದ್ದ ನನ್ನ ಮನಸ್ಸಿಗೆ ಸ್ಪಂದಿಸುವ ಸ್ಪಂದಿಸುವಿಕೆಯೇ ನಶಿಸಿ ಹೋಗುತ್ತಿದೆ ಎಂಬಂತಾ ಭಾವ.
ನಿನ್ನನ್ನು ಪ್ರೀತಿಸಿದ ತಪ್ಪಿಗೆ, ನನ್ನ ಮನೆಯವರನ್ನೆಲ್ಲಾ ಎದುರಾಕಿಕೊಂಡು ನಿನ್ನ ಮಾತು ಕೇಳಿದ್ದಕ್ಕೆ ನೀನು ನನಗೆ ಸರಿಯಾಗಿ ಪಾಠ ಕಲಿಸಿದ್ದೀಯಾ, ಏಕೆಂದರೆ ನಾನು ನಿನ್ನ ಪ್ರೀತಿಗೆ ಶರಣಾದ ಆಗಂತುಕನಲ್ಲವೇ ?

ಮುತ್ತು ಜಾರಿದರೆ ಹೋಯಿತು, ಗಾಜು ಒಡೆದರೆ ಹಾಳಾಯಿತು ಎಂಬಗಾದೆ ಭಗ್ನ ಹೃದಯಕ್ಕೆ ಹೇಳಿ ಮಾಡಿಸಿದಂತಿದೆ ನನಗೀಗಲೂ ಕಾಡುತ್ತಿರುವ ಪ್ರಶ್ನೆಗಳೆಂದರೆ ನಿನ್ನ ಮನಸ್ಸಿಗೆ ಸಂಬಂಧಿಸಿದವುಗಳೇ, ನೀ ನನ್ನಿಂದ ದೂರ ಹೋದುದಕ್ಕೆ ಕೆಲ ದಿನ ಹೃದಯ ಭಯಂಕರ ಚಂಡಮಾರುತದ ನಂತರ ಕಾಣುವ ನೀರವತೆಯಂತೆ ನಿಶ್ಯಬ್ದವಾಗಿತ್ತು, ಯಾವ ರಾಗ-ಭಾವಕ್ಕೂ ಸ್ಪಂದಿಸದೆ ನಿಶ್ಚಲವಾಗಿತ್ತು ಅದೆಂಥದ್ದು ಎಂಬ ಪ್ರಶ್ನೆ ಮಾತ್ರ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಿತು.

ಆದರೆ,

ಇಂದೇಕೋ ನಿನ್ನ ನೆನಪುಗಳು ಬಿಟ್ಟನೇಂದರೂ ಬೆಂಬಿಡದೆ ಕಾಡತೊಡಗಿದೆ, ಆ ಹೊಳಪು, ಆ ನಿನ್ನ ಹರಿತ ಮಾತುಗಳ ಜೋರು ಜೋರು ನನ್ನನ್ನು ಹಾಸಿಗೆ ಬಿಟ್ಟು ಕದಲದಂತೆ ಮಾಡಿದೆ.

ಅಷ್ಟಕ್ಕು ನಿನ್ನ ನೆನಪುಗಳೇಕೆ ಹೀಗೆ ಒತ್ತರಿಸಿ ಬರುತ್ತಿದೆ ???

ಆದರೂ ನನ್ನ ಭಾವನೆಗಳಿಗೆ ನಾನೇ ಪರಿಹಾರ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇನೆ ಏಕೆಂದರೆ ಇದು ಸಹ ನಾನು ನಿನ್ನಿಂದ ಕಲಿತುಕೊಂಡ ಪಾಠ.

.....ಇ೦ತಿ ನೊ೦ದವ