ಕಪ್ಪುರಂಧ್ರ

ನಗುವಿಗೆ ......
ಮೆರಗನ್ನು... ಮೆಚ್ಚುಗೆಯನ್ನು.....
ಅಳುವಿಗೆ....
ಕಣ್ಣೀರ ಜೀವಂತಿಕೆಯನ್ನು........
ಬಿಂಬಿಸುವ .....
ದರ್ಪಣ ನೀನಾಗಬೇಕೆಂದು
ಬಯಸಿದೆ.....

ನೀನೋ.......
ಒಂದು ಬೆಳಕ ಜೀವ ಕಣವನ್ನೂ
ಬಿಡದೆ ಸೆಳೆದು
ನನ್ನ ನಿಸ್ತೇಜನನ್ನಾಗಿಸಿದೆ.....
ನಿನ್ನೊಳಗೆ ಅಂತರ್ಧಾನವಾಗುವ
ಮುನ್ನ ಸಾವರಿಸಿಕೊಂಡು ಅರುಹುತ್ತಿರುವೆ.....
’ಬಿಟ್ಟುಬಿಡು... ಬಿಟ್ಟುಬಿಡು.....
ನಿನ್ನಿನ್ನು ಪ್ರೀತಿಸುವುದಿಲ್ಲ... ಪ್ರೀತಿಸುವುದಿಲ್ಲ... ’
ನನ್ನ ಪ್ರೀತಿಯ........
"ಕಪ್ಪುರಂಧ್ರ"

’ ಎಳೆ... ಎಳೆ ... ಎಳೆಸು....’

ಒಲವ ಹುಡುಕಾಟದೀ....
ಮನದ ಮಾತು ಕೇಳಿದೆ...
ಅದು ತೋರಿದೆಡೆಗೆ.... ದೂಡಿದೆಡೆಗೆ....
ಚಲಿಸಿದೆ.....ಚಲಿಸಿದೆ.....ಚಲಿಸಿದೆ.....

ಸದ್ಯ ನಿಂತಿರುವೆ......
ನಿಂತದ್ದು ತಪ್ಪೆನಿಸಿರಬಹುದು....
ಸಹಜವೂ ಇರಬಹುದು......
ಗುರಿಮುಟ್ಟುವ ಆತುರವು ಇರಬಹುದು....
ಬೇಸರವಿಲ್ಲ....

ಈಗ ನನ್ನ ಮನದ ವಿಕಲ್ಪಕೆ
ಎರಡು ಸಂಭವನೀಯತೆಯಿದೆ....
೧) ಮನದ ದಿಕ್ಸೂಚಿಯೇ ಕೆಟ್ಟಿರಬಹುದು....
೨) ಗುರಿಯೇ ಮುಖವಾಡ ಧರಿಸಿರಬಹುದು....

ಯಾಕೋ ಪೆಚ್ಚೆನಿಸಿದೆ.....
ಸ್ಥಾವರದ ಅಸ್ಥಿರತೆ ಕಾಡಿಸುತ್ತಿದೆ....
ಜಂಗಮದ ಅನಂತತೆ ಅಣಕಿಸುತ್ತಿದೆ....
"ಎಳೆ... ಎಳೆ.... ಎಳೆಸು....."