ಎಂದಿನಂತೆ ಸುಮಾರು ೭:೪೦ ತಕ್ಕೆ ಕ್ಯಾಬ್ ಹತ್ತಿದ್ದಾಯ್ತು. ಅಂಕಲ್-ಆಂಟಿಗಳೇ ತುಂಬಿರುವ ಕ್ಯಾಬ್ ಆದ್ದರಿಂದ ವ್ಯರ್ಥ ಹರಟೆ ಅಷ್ಟಾಗಿ ಇಲ್ಲ. ಅವರೆಲ್ಲ ಮಾತಾಡ್ತಾ ಇದ್ದರೆ ಅಂದ್ರೆ ಬೆಂಗಳೂರಿನಲ್ಲಿ ಟೆರರಿಸ್ಟ್ ಅಟ್ಯಾಕೋ, ಸತ್ಯಂ ಥರ ಸ್ಕ್ಯಾಂಡಲೋ ಅಥವ ಇಂಕಮ್ ಟ್ಯಾಕ್ಸ್ ಜಾಸ್ತಿ ಆಗಿರ್ಬೇಕು. ಹರಟೆ ಇಲ್ಲದಿರುವಾಗ ನಿದ್ದೆ ಸರಾಗವಾಗಿ ಬರುತ್ತೆ. ಆದ್ರೆ ಸೀಟು ಸರಿಯಿಲ್ಲದಿರೋದ್ರಿಂದ ಬರೆ ಅರೆ ನಿದ್ದೆ ಮಾತ್ರ ಬರುತ್ತೆ. ಎಫ್ ಎಂ ರೇಡಿಯೋ ಗುನುಗುವ ಕನ್ನಡ ಹಾಡು ಕೇಳ್ಕೊಂಡು ಒಂದು ಘಂಟೆಯ ಅರೆ ನಿದ್ದೆ ಮಾಡೋದು ನಿತ್ಯದ ಅಭ್ಯಾಸ ಆಗಿಹೋಗಿದೆ.
ಸರಿ ಇವತ್ತೂ ಹಾಗೆ ನಿದ್ದೆ ಮಾಡಿ, ಆಫೀಸ್ ಹತ್ರ ಬಂದಾಗ, ಎಚ್ಚರವಾಗಿ, ಶರ್ಟ್ ನ ಮೇಲೆ ಎರಡು ನೀರಿನ ಬೊಟ್ಟುಗಳು ಕಂಡವು. ಮಳೆ ಬಿದ್ದಿರಲಿಲ್ಲ, ಅಕ್ಕ ಪಕ್ಕ ಯಾರೂ ನೀರಿಟ್ಟಿರಲ್ಲಿಲ್ಲ, ಜೊತೆಗೆ ತುಟಿಯ ಒಂದು ತುದಿ ಒದ್ದೆಯಾಗಿತ್ತು. ನೀವು ಈ ವೇಳೆಗಾಗಲೇ ಊಹಿಸಿದ್ದರೆ "ಹೌದು ನಾನು ನಿದ್ದೆ ಮಾಡುವಾಗ ೨ ಹನಿ ಜೊಲ್ಲು ಸುರಿದಿತ್ತು". ಸ್ವಲ್ಪ ಕಸಿವಿಸಿಯಾಯ್ತು, ಯಾರಾದ್ರು ನೋಡಿ ನಕ್ಕಿದ್ರೆ ? ಅಂತ ಬಹಳ ಮುಜುಗರವಾಯ್ತು. ನಿಧಾನವಾಗಿ ಮರಗಳು ತೊಗಟೆಯಿಂದ ಸ್ರವಿಸುವ ಅಂಟಿನಂತೆ ಇದು ಜಾರಿದ್ದರೆ ಖಂಡಿತ ಯಾರದರೂ ನೋಡಿರುತ್ತಾರೆ, ಅದ್ರೆ ಹಕ್ಕಿ ಪಿಕ್ಕೆಯಂತೆ ಥಟ್ ನೆ ಮಿಂಚಿ ಮಾಯವಾಗಿದ್ದರೆ ಯಾರೂ ನೋಡಿರಲಾರರು. ಅಷ್ಟಕ್ಕೂ ಬೇರೆಯವರನ್ನು ನೋಡೊ ಪುರುಸೊತ್ತು ಇಲ್ಲಿರೊರ್ಗೆ ಎಲ್ಲಿದೆ ? ಅಂತ ಸಮಾಧಾನ ಹೇಳಿಕೊಂಡು ಕ್ಯಾಬ್ ನಿಂದ ಇಳಿದೆ. ಆದ್ರು ಪೂರ್ತಿ ಸಮಾಧಾನ ಆಗ್ಲಿಲ್ಲ.
ಈ ರೀತಿ ಜೊಲ್ಲು ಸುರಿಸಿ ಸುಮಾರು ೧೦ ವರ್ಷಗಳ ಮೇಲೆ ಆಗಿತ್ತು. ನನ್ನ ತಮ್ಮ "ಜೆ ಪಿ" ಅಂತಲೆ ನನಗೆ ನಾಮಕರಣ ಮಾಡಿದ್ದ.ಅವನಿಟ್ಟ ಬೇಕಾದಷ್ಟು ಹೆಸರುಗಳು ಅಂಟಿವೆ, ಪುಣ್ಯಕ್ಕೆ ಈ ಹೆಸರು ನನಗೆ ಅಂಟಲಿಲ್ಲ. ತಿಂಡಿ ನೋಡಿಯೊ, ಹುಡುಗಿ ನೋಡಿಯೊ ಜೊಲ್ಲು ಸುರಿಸಿದರೆ ಅದು ಸಹಜ ಅನ್ನಬಹುದು ಆದ್ರೆ ಸುಮ್ನೆ ಮಾತಾಡುವಾಗ, ನಿದ್ದೆ ಮಾಡೊವಾಗ ಜೊಲ್ಲು ಬಂದ್ರೆ ಅದಕ್ಕೆ ಅರ್ಥವೇ ಇಲ್ಲದಂತಾಗುತ್ತೆ. ಕಷ್ಟಪಟ್ಟು ತೊಲಗಿಸಿದ ಅವಲಕ್ಷಣ ಮತ್ತೆ ಎದುರಾಯ್ತಲ್ಲ ಅಂತ ಬೇಜಾರಾಯ್ತು. ಜೊತೆಗೆ ಆಗ "ಏನೊ ಹುಡ್ಗ ಗೊತ್ತಾಗಲ್ಲ" ಅಂತ ನೋಡ್ಡ್ದೋರು ಮರೆತುಬಿಡ್ತಿದ್ರು, ಅದ್ರೆ ಇನ್ನೇನು ಅಂಕಲ್ ಕ್ಯಾಟಗರಿಗೆ ಸೇರುವ ಹೊಸ್ತಿಲಲ್ಲಿರುವವನು ಜೊಲ್ಲು ಸುರಿಸಿದರೆ ನೆನಪಲ್ಲಿಟ್ಕೊತಾರೆ ಅನ್ನಿಸಿತು. ಆದ್ರೆ ಏನ್ ಮಾಡೋದು ಬಿಟ್ಟ ಬಾಣ, ಬಿದ್ದ ಜೊಲ್ಲು ಜೊಲ್ಲು ಹಿಂಪಡೆಯಲು ಆಗೋದಿಲ್ಲ ಅಂತ ನನಗೆ ನಾನೇ ಹೇಳಿಕೊಂಡು ಕ್ಯೂಬಿಗೆ ಹೋಗಿ ಕೆಲಸ ಪ್ರಾರಂಭಿಸುವ ಹೊತ್ತಿಗೆ ಶರ್ಟ್ ನ ಮೇಲಿದ್ದ ನೀರ ಹನಿಗಳು ಮಾಯವಾಗಿದ್ದವು