ಒಬ್ಬಟ್ಟಿಗೆ ಬೇಕಾಗುವ ಸಾಮಗ್ರಿಗಳು :
ಹೂರಣಕ್ಕೆ - ೧ ಲೋಟ ತೊಗರಿಬೇಳೆ, ೧ ಲೋಟ ಬೆಲ್ಲ, ೧/೨ ಲೋಟ ತೆಂಗಿನಕಾಯಿ, ಚಿಟಿಕೆ ಏಲಕ್ಕಿ.
ಕಣಕಕ್ಕೆ - ೧ ಲೋಟ ಮೈದಾಹಿಟ್ಟು, ಚಿಟಿಕೆ ಹರಿಶಿಣ, ನೀರು, ೨ ಬಟ್ಟಲು ಎಣ್ಣೆ

ಒಬ್ಬಟ್ಟು ಮಾಡುವ ವಿಧಾನ : ಮೊದಲಿಗೆ ತೊಗರಿಬೇಳೆ ಬೇಯಿಸಿಕೊಳ್ಳಬೇಕು. ಅದು ಮುಕ್ಕಾಲು ಬೆಂದಾಗ, ಅದರ ನೀರನ್ನು ಪೂರ್ತಿ ಬಸಿದುಕೊಳ್ಳಬೇಕು. ನಂತರ ಕುಟ್ಟಿಕೊಂಡಿರುವ ಬೆಲ್ಲ, ತೆಂಗಿನಕಾಯಿ, ಏಲಕ್ಕಿ ಹಾಕಿ ತಿರುವಬೇಕು. ಸ್ವಲ್ಪ ಪಾಕ ಗಟ್ಟಿಯಾದ ನಂತರ ಒಲೆಯ ಮೇಲಿಂದ ಇಳಿಸಿ, ಅದು ತಣ್ಣಗಾದ ನಂತರ ಬೇಯಿಸಿದ ಸಾಮಗ್ರಿಯನ್ನು ರುಬ್ಬಬೇಕು. ಈಗ ಹೂರಣ ರೆಡಿ. ಮೈದಾಹಿಟ್ಟು, ಚಿಟಿಕೆ ಹರಿಶಿಣ, ಸ್ವಲ್ಪ ಉಪ್ಪು ಹಾಕಿ ಬೆರೆಸಿ, ಚಪಾತಿಗಿಂತ ಸ್ವಲ್ಪ ನೀರಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ೨ ಬಟ್ಟಲು ಎಣ್ಣೆ ಹಾಕಿ ಅದನ್ನು ನೆನೆಯಲು ಬಿಡಬೇಕು. ೧/೨ ಗಂಟೆಯ ನಂತರ, ಸ್ವಲ್ಪ ಕಣಕವನ್ನು ತೆಗೆದುಕೊಂಡು ಕೈನಲ್ಲಿ ಹರಡಿಸಿಕೊಂಡು, ಹೂರಣವನ್ನು (ಒಂದು ಲಿಂಬೆಕಾಯಿ ಗಾತ್ರ) ಅದರಲ್ಲಿ ತುಂಬಿ, ಒಂದು ಪ್ಲಾಸ್ಟಿಕ್ ಕವರಿನ ಮೇಲೆ ಎಣ್ಣೆ ಸ್ವಲ್ಪ ಕೈಗೆ ಹಚ್ಚಿಕೊಂಡು ತಟ್ಟಬೇಕು. ಕಾವಲಿ ಸ್ವಲ್ಪ ಬೆಚ್ಚಗಾದ ಮೇಲೆ ಅದಕ್ಕೆ ಈ ತಟ್ಟಿಕೊಂಡ ಒಬ್ಬಟ್ಟನ್ನು ಹಾಕಿ ಒಂದು ಸ್ಪೂನ್ ಎಣ್ಣೆ ಹಾಕಿ ಎರಡು ಕಡೆ ತಿರುವಿ ಹಾಕಿ ಸ್ವಲ್ಪ ಹೊಂಬಣ್ಣ ಬರುವ ಹಾಗೆ ಬೇಯಿಸಬೇಕು. ಇದನ್ನು ಅರ್ಧ ಮಡಚಿ ಕಾವಲಿಯಿಂದ ತೆಗೆಯಬೇಕು. ಈಗ ಬಿಸಿ ಬಿಸಿ ಒಬ್ಬಟ್ಟು ರೆಡಿ. ಅದರ ಮೇಲೆ ೧ ಚಮಚ ತುಪ್ಪ ಹಾಕಿ ತಿಂದರೆ ಆಹಾ! ಏನು ರುಚಿ, ಬಾಯಲ್ಲಿ ಈಗಲೇ ನೀರೂರುತ್ತಿದೆ :-)

ವಿ.ಸೂ : ಈಗಾಗಲೇ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವವರು ತಿಂದು ನನ್ನ ಮೇಲೆ ಕೇಸ್ ಹಾಕಬಾರದಾಗಿ ವಿನಂತಿ :-) ಅವರು ಇದನ್ನು ತಿನ್ನದೇ ಈ ಕೆಳಗೆ ಕೊಟ್ಟಿರುವ ಮಾಹಿತಿಯನುಸಾರ ಸಾರನ್ನು ಮಾಡಿ, ಒಬ್ಬಟ್ಟನ್ನು ನನಗೆ ಕಳುಹಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ :-)

ಒಬ್ಬಟ್ಟಿನ ಸಾರು : ಬೇಕಾಗುವ ಸಾಮಗ್ರಿ : ೧ ಚಮಚ ಜೀರಿಗೆ, ೬-೭ ಎಸಳು ಬೆಳ್ಳುಳ್ಳಿ, ಸಣ್ಣ ಲಿಂಬೆ ಗಾತ್ರದಷ್ಟು ಹುಣಸೇಹಣ್ಣು, ೧ ಚಮಚ ಎಣ್ಣೆ ಹಾಕಿ, ಹುರಿದುಕೊಂಡಿರುವ ಮೀಡಿಯಮ್ ಗಾತ್ರದ ಈರುಳ್ಳಿ, ಸಾಂಬಾರಿನ ಪುಡಿ, ಇದೆಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಿ. ಬೇಳೆ ಬೆಂದ ಮೇಲೆ ಅದರ ನೀರನ್ನು ಬಸಿದು ಇಟ್ಟುಕೊಂಡಿದ್ದೀರಲ್ಲವೇ. ಒಂದು ಪಾತ್ರೆಯಲ್ಲಿ ೨ ಸ್ಪೂನ್ ಎಣ್ಣೆ ಹಾಕಿ, ೧/೨ ಸ್ಪೂನ್ ಸಾಸಿವೆ ಹಾಕಿ, ಅದು ಚಟಗುಟ್ಟಿದ ತಕ್ಷಣ ಕರಿಬೇವು ಹಾಕಿ. ನಂತರ ಅದಕ್ಕೆ ರುಬ್ಬಿಕೊಂಡ ಮಸಾಲೆ ಹಾಕಿ, ಹುಣಸೇಹಣ್ಣಿನಷ್ಟು ಬೆಲ್ಲ ಕೂಡ ಹಾಕಿ, ಬೇಳೆ ಬಸಿದ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಕುದಿಸುವಾಗ ಇನ್ನೂ ಸ್ವಲ್ಪ ಕರಿಬೇವು ಮತ್ತು ಸ್ವಲ್ಪ ಹೂರಣವನ್ನು ಹಾಕಿದರೆ ಇನ್ನೂ ಬಹಳ ರುಚಿಯಾಗಿರುತ್ತದೆ.

ಇದನ್ನು ಕುದಿಸಿ, ಕುದಿಸಿ ೨-೩ ದಿನಗಳವರೆಗೂ ಉಪಯೋಗಿಸಬಹುದು. ಅನ್ನದೊಂದಿಗೆ ಬಹಳ ರುಚಿಯಾಗಿರುತ್ತದೆ.

ಸಂಪದಿಗರೇ, ಮನೆಯಲ್ಲಿ ಮಾಡಿ, ಚೆನ್ನಾಗಾದರೆ ನನಗೂ ಕಳಿಸಿ, ಇಲ್ಲದಿದ್ದರೆ ನನಗಂತೂ ಶಾಪ ಹಾಕಬೇಡಿ :-)

ಯುಗಾದಿಯ ಶುಭಾಶಯಗಳು