ನೆನ್ನೆ ಇದ್ದೆಡೆ ಇಂದಿಲ್ಲ ಇಂದಿರುವೆಡೆ ಇರುವುದಿಲ್ಲ ನಾಳೆ
ಮನವಿರುವುದಿಲ್ಲ ಒಂದೇ ಕಡೆ . ಇಲ್ಲ ಒಂದೇ ನಡೆ
ಭೇಷ್ ಪಕ್ಷಾಂತರಿಗಳನ್ನೂ ಮೀರಿಸುವ ಈ ಬುದ್ದಿಗೆ

ಸರಿ ಎಂದುದು ನೆನ್ನೆ , ತಪ್ಪಾಯಿತೆ ನಾಳೆಗೆ
ತಪ್ಪಾದುದು ಇಂದು ಒಪ್ಪು ನಾಳೆಗೆ
ಗೋಸುಂಬೆಗೂ ಇವರ ಕಂಡರೆ ನಾಚಿಕೆ

ಹೇಳುವುದು ಒಂದು ಮಾಡುವುದು ಮತ್ತೊಂದು
ನೀತಿ ಹೇಳಿಕೆಗೊಂದು, ಬಾಳುವೆಗೊಂದು
ಹೇಳಿದಂತೆ ಬಾಳಲಾರರು. ಬಾಳಿದ್ದನ್ನ ಹೇಳಲಾರರು

ಸುಮ್ಮ ಸುಮ್ಮನೆ ಹಾಯ ಹಾಯುತ ಬರುವರು
ತಲೆ ಕೆಡಿಸೋ ಮಾತ ಹೇಳಿ ಸಮಯ ಕಳೆವರು
ಎತ್ತ ಬರುವುದೋ ಗಾಳಿ ಅತ್ತ ತೂರಿಕೊಳುವರು

ಜೊಳ್ಳು ಜೊಳ್ಳೆ ಕಾಳು ಕಾಳೇ
ಕಾಳ ಜೊಳ್ಳ ಮಾಡಿ ಜೊಳ್ಳ ಕಾಳ ಮಾಡಿ
ಪಡೆವರೇನಂತಹ ನೆಮ್ಮದಿ

ಇವರಿಗೇನೋ ಜಗಳದಿ ಪ್ರೇಮವಂತೆ
ಸ್ನೇಹಕ್ಕೆ ಇವರು ಬಲು ದೂರವಂತೆ
ಇಂದು ಸ್ನೇಹಿತರು ನಾಳೆ ಕಡುವೈರಿಗಳಂತೆ