ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ.

ಸರ್ವರ್‌ ನಿರ್ವಹಣೆ, ಆಕರದ ಬದಲಾವಣೆಗಳು - ಸಂಪದದೊಂದಿಗೆ ನಡೆದುಕೊಂಡು ಬಂದಿರುವ ಲರ್ನಿಂಗ್ ಸೆಂಟರ್, ಕನ್ನಡ ಲೋಕಲೈಸೇಶನ್ ಹಾಗೂ ಪ್ಲಾನೆಟ್ ಕನ್ನಡಗಳಂತಹ ತಾಣಗಳು ಹಾಗೂ ಪ್ರಾಜೆಕ್ಟುಗಳ ನಿರ್ವಹಣೆ - ಇವೆಲ್ಲ ನಮ್ಮಲ್ಲಿ ಕೆಲವರು ದಿನನಿತ್ಯದ ಕೆಲಸದ ಮಧ್ಯೆ ಬಿಡುವುಮಾಡಿಕೊಂಡು ನಡೆಸಿಕೊಂಡು ಹೋಗುತ್ತಿರುವ ಕೆಲಸಗಳು. ಇನ್ನು ಮುಂದೆ ಈ ಕೆಲಸಗಳನ್ನು ಉತ್ಸಾಹವಿದ್ದವರೊಂದಿಗೆ ಹಂಚಿಕೊಂಡು ನಿಜವಾದ ಸಮುದಾಯವೊಂದರಂತೆ ಮುಂದುವರೆಯುವ ಕನಸು ಹೊತ್ತು ಹೊಸ ಅಂಚೆಪಟ್ಟಿಗಳನ್ನು ಪ್ರಾರಂಭಿಸಲಾಗಿದೆ.

ಈ ಹಿಂದೆ ಹಲವರು ಸಂಪದದ ಹಿನ್ನೆಲೆಯ ಕೆಲಸಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿ ನನಗೆ ಪತ್ರ ಬರೆದದ್ದುಂಟು. ದಿನನಿತ್ಯದ ಈ-ಮೇಯ್ಲುಗಳ ರಾಶಿಯಲ್ಲಿ ಓದಿ ಉತ್ತರಿಸಬೇಕೆಂದುಕೊಂಡ ಪತ್ರಗಳು ಹಾಗೆಯೇ ಕರಗಿ ಹೋಗಿ ಕಳೆದುಹೋದವು. ಉತ್ಸಾಹ ತೋರಿದವರು ಅದರಿಂದ ನಿರಾಶರಾಗದೆ ಈ ಅವಕಾಶ ಬಳಸಿಕೊಂಡು ಸಮುದಾಯದೊಂದಿಗೆ ಕೂಡಿ ಪಾಲ್ಗೊಳ್ಳುವರೆಂದು ಆಶಿಸುತ್ತೇನೆ.

ಹೊಸ ಅಂಚೆಪಟ್ಟಿಗಳು ಇಂತಿವೆ:
೧) ಸಂಪದವನ್ನು ಉತ್ತಮಗೊಳಿಸುವ ಸಲಹೆಗಳು ಮತ್ತು ಐಡಿಯಗಳನ್ನು ಮುಂದಿಡಲು {Ideas} ಅಂಚೆಪಟ್ಟಿ.

೨) {Sampada-dev} ಅಂಚೆಪೆಟ್ಟಿಗೆ ಸಂಪದ ಬಳಸುವ ತಂತ್ರಾಂಶವನ್ನು ಉತ್ತಮಪಡಿಸುವುದರಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರಿಗಾಗಿ.*

೩) ಮುಕ್ತ ತಂತ್ರಾಂಶವನ್ನು ಕನ್ನಡಕ್ಕೆ ಅನುವಾದ ಮಾಡಲು, ಭಾಷಾಂತರ ಮಾಡುವಾಗ ಮುಂದಾಗುವ ಸಮಸ್ಯೆಗಳನ್ನು ಚರ್ಚಿಸಲು {Translators} ಅಂಚೆಪಟ್ಟಿ.

ಸಂಪದದ ಸರ್ವರ್‌ನಲ್ಲಿರುವ ಅಂಚೆಪೆಟ್ಟಿಗೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

* - ತಂತ್ರಾಂಶವನ್ನು ಉತ್ತಮಪಡಿಸುವ ದೆಸೆಯಲ್ಲಿ ನಡೆಯುವ ಕೆಲಸಗಳಿಗೆ ತಂತ್ರಜ್ಞಾನದ ಜ್ಞಾನ ಸಂಪೂರ್ಣವಾಗಿ ಇರಲೇಬೇಕೆಂದೇನಿಲ್ಲ - ಉತ್ಸಾಹವಿದ್ದರಾಯಿತು, ಉಳಿದದ್ದು ಕಲಿಯಲು ಕಷ್ಟವಾಗುವುದಿಲ್ಲ.