ತಪ್ಪಾಗಿದೆ!!!!!
ಒಮ್ಮೆ ನನ್ನನ್ನು ಶಪಿಸುತ್ತೇನೆ ಒಮ್ಮೆ ನಿನ್ನನ್ನು ಶಪಿಸುತ್ತೇನೆ, ನನ್ನದೇ ತಪ್ಪೆಂದು ಚಿಂತಿಸಿದ ಮರುಕ್ಷಣವೇ ನಿನ್ನ ತಪ್ಪಿನ ಅಗಾಧತೆ ಧುತ್ತೆಂದು ಎದುರಿಗೆ ಬಂದು ನಿಲ್ಲುತ್ತದೆ. ನನ್ನನ್ನು ಶಿಕ್ಷಿಸಿಕೊಳ್ಳುವ ನಿಧಾ೯ರದ ಹಿಂದೆಯೇ ನಿನ್ನನ್ನೂ ಶಿಕ್ಷಿಸುವ, ಶಿಕ್ಷಿಸಬೇಕೆನ್ನುವ ಯೋಚನಾ ಲಹರಿ.
ಜೀವಾ ಕಳೆವಾ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣಾ ಉಳಿಸೋ ಖಾಯಿಲೆಗೆ ಪ್ರೀತಿ ಎಂದೆನ್ನ ಬಹುದೇ?...........
ಯೋಚನೆಗಳು ನೂರಾರು ಅಲೆ ಅಲೆಗಳಾಗಿ ತೆರೆ ತೆರೆಗಳಾಗಿ ಬಂದು ಮನಸ್ಸನ್ನು ಬಡಿಯುತ್ತಿದ್ದರೆ ನಾನು ದಡದ ಮೇಲೆ ಕಾಲಗಳಿಂದ ಕುಳಿತ ಕಲ್ಲಾಗಿದ್ದೇನೆ, ನಾನು ಇಲ್ಲಿಯೇ ಇದ್ದೇನೆ ಮಳೆ ಬಂದಾಗ ತೆರೆ ಬಂತು, ಪ್ರವಾಹ ಬಂತು, ಬಿರು ಬಿಸಿಲಿಗೆ ಮೈ ಒಡ್ಡಿದವನು, ಒಮ್ಮೆಲೇ ನಿನ್ನ ಒಡಲೊಳಗೆ ಮುಳುಗಿ ಹೋದೆ, ನೀನು ಬತ್ತಿ ಹೋದಾಗ ನನ್ನ ಕಣ್ಣೀರು ಕೂಡ ನಿನ್ನೊಡಲು ಸೇರಿ ಬತ್ತಿ ಹೋಗಿತ್ತು, ಕುಳಿತಲ್ಲೇ ಕುಳಿತು ನಿನ್ನ ಏರಿಳಿತಗಳನ್ನು ದಾಖಲಿಸುತ್ತಾ ಹೋದೆ ನಾನು ಅಲ್ಲಿಯೇ ಉಳಿದೆ.
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರುಲು ಕಣ್ಣಾ ಹನಿ ಸುಮ್ಮನೆ ಒಳಗೆ.........
ನಾನು ಜೊತೆಗಿದ್ದೇನೆ ಎಂಬ ಭಾವ ಮಾತ್ರ ಸತ್ಯ, ನಾನು ಎಲ್ಲೆಡೆಯೂ ಇರಬಲ್ಲೆ ಎಂಬುದು ಸುಳ್ಳು ಎನ್ನುವುದು ನನ್ನ ಅನಿಸಿಕೆ, ಗಂಡ ಮನೆ ಮಕ್ಕಳು ಎಲ್ಲವೂ ನಾನು ಅಂದುಕೊಂಡದ್ದು, ನಿಜವೋ ಅಲ್ಲವೋ ಆ ಮಾತು ಬೇರೆ. ಅವನಿದ್ದಾನೆ ಅವನಿಗಾಗಿ, ಅವಳಿದ್ದಾಳೆ ಅವಳಿಗಾಗಿ ಎನ್ನುವ ಭಾವ ತಂದುಕೊಡುವ ಧೈಯ೯, ಸ್ಥೈಯ೯,ನೈತಿಕ ಬಲಗಳನ್ನು ಇನ್ನಾವುದೂ ತಂದು ಕೊಡಲಾರದು ಎಂದುಕೊಳ್ಳುತ್ತೇನೆ, ಸ್ವತಃ ಅವಳೂ ಕೂಡ;ಸ್ವತಃ ಅವನೂ ಕೂಡ!!
ನಾ ನುಡಿದ ಮಾತುಗಳೆಲ್ಲಾ ಅಪಾಥ೯ಗಳಾದಾಗ ನನ್ನ ರೀತಿಯ ಪ್ರೀತಿ ಪ್ರೀತಿಯೇ ಅಲ್ಲವೆಂದಾಗ ಮನಸ್ಸಿಗೆ ಆಗುವ ಗಾಯ ಆರಲಾದ್ದು;ಮಾಯಲಾರದ್ದು. ನಾ ನುಡಿದ ಪ್ರತಿ ಮಾತೂ ಅಪಾಥ೯ವಾದಾಗ ಮಾತನಾಡದಿರುವುದು ಲೇಸು ಎಂಬ ಭಾವಕ್ಕೆ ಬಂದು ಬಿಡುವಂತಾಗುತ್ತದೆ, ಮನಸ್ಸು ಮೌನಕ್ಕೆ ಶರಣಾಗುತ್ತದೆ.
ನಾ ಮಾಡಿದ ಅಡುಗೆ, ನನ್ನ ಪ್ರೀತಿ, ನನ್ನ ಮಾತು, ನನ್ನ ಭಾವನೆಗಳು,ನಾ ಉಡುವ ರೀತಿ, ನಾ ಉಣ್ಣುವ ರೀತಿ ಇವೆಲ್ಲದು ಸೇರಿಯೇ ನಾನು ಎನ್ನಿಸಿಕೊಳ್ಳುವುದು ಇವೆಲ್ಲವೂ ಸರಿ ಇಲ್ಲವೆಂದಮೇಲೆ ನಾನು ಸರಿ ಇಲ್ಲ ಎಂದೇ ಅಥ೯.
ಜೀವನ ಒಂದು ಪಯಣ, ಮೊದಲ ಭೇಟಿಗೂ ಮೊದಲ ವಿದಾಯಕ್ಕೂ ನಡುವಿನದ್ದು. ನನಗೆ ಅವಸರವಿಲ್ಲ ನಿನ್ನ ಬಿಟ್ಟು ನೀನು, ನಿನ್ನ ಬಿಟ್ಟು ನಾನು ಮುಂದೆ ಹೋದೇವೆಂಬ ಭಯವಿಲ್ಲ ಮೊದಲ ಭೇಟಿ ಮಾತ್ರ ನಿಜ ಮೊದಲ ವಿದಾಯ ವಿಧಾತನ ಕೈಯಲ್ಲಿ ಇರುವ ರಹಸ್ಯ ಅದು ಇಂದು ನಾಳೆ ಎಂದು ಕಾಯದಿರಬಹುದು, ನಮ್ಮ ಬೆಳಗಿನ ಭೇಟಿ ನಮ್ಮ ಕೊನೆಯ ಭೇಟಿಯಾಗಿರಲು ಸಾಕು ಅಂಥ ಪರಿಸ್ಥಿತಿಯಲಿ ಮನಸ್ಸಿನಲಿ ಕೊನೆಯ ಭೇಟಿಯ ನಂಜು ಉಳಿಯದಿರಲಿ,ಹೊರಡಪ್ಪಾ ನಿನ್ನ ಪಾತ್ರ ಮುಗಿಯಿತು ಎಂದಾಗ ಛೇ! ನನ್ನ ಪ್ರೀತಿಯೊಂದಿಗಿನ ಕೊನೆಯ ದೃಶ್ಯ ಹಾಳು ಮಾಡಿದೆನಲ್ಲಾ? ಎಂಬ ಭಾವ ಕಾಡದೆ ಪಾತ್ರ ಕಳಚುವಂತಾದರೆ ಅದಕ್ಕಿಂತಾ ನೆಮ್ಮದಿಯ ವಿದಾಯ ಇನ್ನೊಂದಿರಲಾರದು.
ಈ ಜೀವನದ ಪ್ರತೀ ಪಾತ್ರವೂ ಅದರದೇ ಆದ ನಿರೂಪಣಾ ಶೈಲಿ, ವ್ಯಕ್ತಿತ್ವ, ರೀತಿ ನೀತಿಗಳನ್ನು ಹೊಂದಿದೆ ಮತ್ತು ಅದಕ್ಕೆ ಮೀಸಲಾಗಿರುವ ಕೆಲವೇ ದೃಶ್ಯಗಳಲ್ಲಿ ಅದು ಬಂದು ಹೋಗುತ್ತದಂತೆ. ನಾನು ಬದಲಾಗಲಿಲ್ಲ ನಾನು ಅಂದಿಗೂ ಇಂದಿಗೂ ಅವನೇ ಕಡೆಯ ಪಕ್ಷ ನಿನ್ನೆಡೆಗಾದರೂ ನಾನು ಅವನೇ ಆಗಿದ್ದೇನೆ, ಆದರೆ ನಾನು ಬೇಡವೆಂದರೂ ಕೆಲವೊಂದು ಬದಲಾವಣೆಗಳು ಜೀವನದಲ್ಲಿ ಆಗುತ್ತಿವೆ, ನನ್ನೊಳಗಿನ ಕವಿಯೊಬ್ಬ ಹೇಳದೇ ಕೇಳದೆ ಮನೆ ಬಿಟ್ಟಿದ್ದಾನೆ, ಅವನನ್ನೊಮ್ಮೆ ಮಾತನಾಡಿಸಿದಾಗ ಅವನಾಡಿದ ಮಾತುಗಳು ನಾನು ಮರೆಯಲಾರದಂತಹವು "ಚೆಂದದ ಹುಡುಗಿಯ ನೋಡಿ, ಇವಳು ಕೋಪಿಸಿಕೊಂಡರೆ ಹೇಗಿರಬಹುದು? ಜಗಳ ಮಾಡಿದರೆ?, ಅತ್ತರೆ, ಹಠ ಮಾಡಿದರೆ? ಎನ್ನುವುದರ ಕಲ್ಪನೆಯಲಿ ತೊಡಗಿರುವ ನಿನ್ನೊಳಗೆ ಇನ್ನೆಂಥ ಕವಿತೆ ಹುಟ್ಟಲು ಸಾಧ್ಯವಯ್ಯಾ?" ಓಡಿ ಹೋಗದೆ ಏನು ಮಾಡಿಯಾನು?
ಜೀವನ ಕೊಟ್ಟ ಏಟುಗಳಿಗೆ ನಿಧಾನವಾಗಿ ತತ್ತರಿಸುತ್ತಿದ್ದೇನೆ ನಿಧಾನವಾಗಿ ಎಲ್ಲವೂ ಒಂದೇ ಅಲ್ಲ ಎಂಬ ಎಚ್ಚರಿಕೆ ಮೂಡುತ್ತಿದೆ ಬೇಡವೆಂದರೂ ಅನುಮಾನಿಸುವ ಮನೋಭಾವ, ಬೇಡವೆಂದರೂ ಸುಳಿಯುವ ಋಣಾತ್ಮಕ ಭಾವಗಳು, ಕನ್ನಡಿಯಲಿ ಕಾಣುವ ಬಿಳಿ ಕೂದಲು, ಹೊಸ ಸುಕ್ಕು ಮೂವತ್ತರ ಹೊಸ್ತಿಲಿಗೆ ಪ್ರಾಯ ಮುಗಿಯಿತೆ ಎಂದು ಕಾಡುವ ಪ್ರಶ್ನೆ. ಆಗೊಮ್ಮೆ ಈಗೊಮ್ಮೆ ಕರೆ ಮಾಡಿ ಮಾತನಾಡಿಸುತ್ತಿದ್ದ ಸ್ನೇಹಿತರೆಲ್ಲ ಇಂದು ದೂರವಾಗಿದ್ದಾರೆ ಎನ್ನಿಸುವ ಭಾವ ಅವರೂ ನನ್ನಂತೆಯೇ ದಿಗಂತದೆಡೆಗೆ ಮುಖ ಮಾಡಿ ನಿಂತರೋ ಎನೋ ದೇವರಿಗೇ ಗೊತ್ತು.
(ಮನಸ್ಸು ಮುದುಡಿದಾಗ ಅದು ಓಡುವ ದಿಕ್ಕು ಮತ್ತು ವೇಗಗಳು ವಿಚಿತ್ರವಾಗಿರುತ್ತವೆ. ಆ ಯೋಚನೆಗಳು ಇಂದು ನನ್ನ ನೆನಪಿನಂಗಳದಲ್ಲಿ ಇಲ್ಲವೇ ಇಲ್ಲ! ಬರೆದು ನಾಲ್ಕು ದಿನವಾಗಿಲ್ಲ ಇದನ್ನು ಓದಿ ಹ್ಹ! ಹ್ಹ! ಹ್ಹ! ಎಂದು ನಗುತ್ತಿದ್ದೇನೆ, ನಿನ್ನ(ಮ್ಮ) ನೋವು ಅದೆಂತಹುದೇ ಇರಲಿ ಕಾಲವೆಂಬುದು ಅದಕ್ಕೆ ಸೂಕ್ತ ಮತ್ತು ಯೋಗ್ಯ ಉತ್ತರವನ್ನು ಕೊಡುತ್ತದೆ... ಪ್ಲೀಸ್ ಸ್ವಲ್ಪ ಸಮಾಧಾನ ತಂದುಕೊಳ್ಳಿ)
-ನರೇಂದ್ರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!