ಒಂದು ರೋಗದ ಸಾವಿನ ಸುತ್ತಮುತ್ತ………..

ನನ್ನ ಬಾಲ್ಯ ಕಾಲದಲ್ಲಿ ಒಂದು ರೋಗ ಸಾಮಾನ್ಯವಾಗಿತ್ತು.  ಕೃಶವಾದ ಮಗುವಿನ ಚಿತ್ರ.  ಹೊಟ್ಟೆಯು ಬಲೂನಿನಂತೆ ಊದಿಕೊಂಡಿರುತ್ತಿತ್ತು.  ಇಂತಹ ಮಗುವಿಗೆ "ಲಿವರ್ ಆಗಿದೆ" ಎಂದು ಹೇಳುತ್ತಿದ್ದರು.  ಇದನ್ನು ಗುಣಪಡಿಸುವುದೆಂದು ನಂಬಲಾಗಿದ್ದ "ಲಿವರ್ ಕ್ಯೂರ್" ಎಂಬ ಔಷಧದ ಗೋಡೇ ಜಾಹೀರಾತುಗಳು ಎಲ್ಲೆಂದರೆಲ್ಲಿ ರಾರಾಜಿಸುತ್ತಿದ್ದವು.

            ಈ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ""ಭಾರತದ ಮಕ್ಕಳ ಯಕೃತ್ ನಾರುಗಟ್ಟುವ ರೋಗ" (ಇಂಡಿಯನ್ ಚೈಲ್ಡ್ ಹುಡ್ ಸಿರಾಸಿಸ್) ಎಂದು ಕರೆಯುತ್ತೇವೆ.

  • ೬ ತಿಂಗಳಿನಿಂದ -೨ ವರ್ಷ ವಯಸ್ಸಿನ ಮಕ್ಕಳು ರಚ್ಚೆ ಹಿಡಿಯಲು ಆರಂಭಿಸುತ್ತಾರೆ. 
  • ಮಂದಗತಿಯ ಜ್ವರ ಕಾಣಿಸಿಕೊಳ್ಳುತ್ತದೆ. 
  • ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ. 
  • ತಿಂದದ್ದು ಮೈ ಹಿಡಿಯುವುದಿಲ್ಲ. 
  • ಕ್ರಮೇಣ ಯಕೃತ್ತು ಹಾಗೂ ಗುಲ್ಮ ಊದಿಕೊಳ್ಳುತ್ತದೆ.  ಹೊಟ್ಟೆ ದಪ್ಪವಾಗುತ್ತದೆ.  ಉದರದಲ್ಲಿ ನೀರು ಸಂಚಯವಾಗುತ್ತದೆ. 
  • ಕಾಮಾಲೆ ಕಾಣಿಸಿಕೊಂಡು ಮಗು ನಿದಾನವಾಗಿ ಕೋಮಾವನ್ನು ತಲುಪಿ ಸಾವನ್ನಪ್ಪುತ್ತದೆ. 

ಇದುವೇ ಭಾರತದ ಮಕ್ಕಳ ಯಕೃತ್ತು ರೋಗ.  ಈ ಹೆಸರು ಬರಲು ಕಾರಣವಿದೆ.  ಈ ರೋಗ ಭಾರತೀಯ ಮಕ್ಕಳಲ್ಲಿ ಮಾತ್ರ ವಿಶೇಷವಾಗಿ ಕಂಡುಬರುತಿತ್ತು.  ಈ ರೋಗದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದಾಗ ಕುತೂಹಲಕರವಾದ ಮಾಹಿತಿಗಳು ದೊರೆತವು. 

  • ಇದು ಹಿಂದೂಗಳಲ್ಲಿ ಕಂಡುಬರುತಿತ್ತು. 
  • ಇದು ತೀರಾ ಶ್ರೀಮಂತರ ಮಕ್ಕಳನ್ನು ಕಾಡುತ್ತಿರಲಿಲ್ಲ.  ತೀರಾ ಬಡವರ ಮಕ್ಕಳನ್ನು ಕಾಡುತ್ತಿರಲಿಲ್ಲ.  ಮಧ್ಯಮ ವರ್ಗದ ಮಕ್ಕಳನ್ನೇ ಹೆಚ್ಚು ಕಾಡುತಿತ್ತು. 
  • ಮುಸಲ್ಮಾನ ಅಥವಾ ಕ್ರೈಸ್ಥ ಮಕ್ಕಳನ್ನು ಕಾಡಿದ ಉದಾಹರಣೆಗಳಿರಲಿಲ್ಲ. 
  • ಒಂದೆ ಕುಟುಂಬದ ಎಲ್ಲಾ ಮಕ್ಕಳು ಅಥವಾ ಒಂದೇ ತಾಯಿಯ ಎಲ್ಲಾ ಮಕ್ಕಳು ಒಂದರ ನಂತರ ಒಂದೊಂದಾಗಿ ಸಾಯುತ್ತಿದ್ದುದರಿಂದ ಇದು ದುಷ್ಟ ಶಕ್ತಿಯ ಕಾಟ ಎಂದು ಸಾಮಾನ್ಯವಾಗಿ ಜನ ನಂಬುತ್ತಿದ್ದರು. 

೧೯೭೯ರ ಅವಧಿಯಲ್ಲಿ ಇಂಗ್ಲಂಡಿನಲ್ಲಿ ಮಹತ್ವಯುತ ಸಂಶೋಧನೆಗಳು ನಡೆದವು.  ನಮ್ಮ ದೇಹದಲ್ಲಿರುವ ಲಘುಪ್ರಮಾಣದ ಖನಿಜಗಳನ್ನು ಪತ್ತೆ ಹಚ್ಚುವ ತಂತ್ರ ಅಭಿವೃದ್ಧಿಗೊಂಡಿತು. 

ಅಯೋಡಿನ್, ಫ಼್ಲೂರಿನ್, ಮಾಲಿಬ್ಡಿನಮ್, ಜ಼ಿಂಕ್, ಕೊಬಾಲ್ಟ್, ತಾಮ್ರ, ಮ್ಯಾಂಗನೀಸ್ ಇತ್ಯಾದಿ ಲೋಹಗಳೆಲ್ಲ ಮೈಕ್ರೋಗ್ರಾಮಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕಾಗುತ್ತವೆ. ಇವು ಕಡಿಮೆಯಾದರೂ ಕಷ್ಟ.  ಹೆಚ್ಚಾದರೂ ಕಷ್ಟ. 

ಟ್ಯಾನ್ನರ್ ಹಾಗೂ ಪೂಪ್ಪರ್ ಎಂಬ  ವೈದ್ಯ ವಿಜ್ಞಾನಿಗಳು ಭಾರತದ ಮಕ್ಕಳ ಯಕೃತ್ ರೋಗದಿಂದ ಸತ್ತ ಮಕ್ಕಳ ಯಕೃತ್ತಿನಲ್ಲಿ ಭಾರೀ ಪ್ರಮಾಣದ ತಾಮ್ರ ಇರುವುದಾಗಿ ಪತ್ತೆ ಹಚ್ಚಿದರು.  ಈ ಸಂಶೋಧನೆಯ ಜಾಡನ್ನು ಹಿಡಿದ ಭಾರತೀಯರು, ತಾಮ್ರವು ಕೇವಲ ಯಕೃತ್ತಿನಲ್ಲಿ ಮಾತ್ರವಲ್ಲ ರಕ್ತ, ಮೂತ್ರ, ಉಗುರು, ಕೂದಲಿನಲ್ಲಿಯೂ ತೀವ್ರ ತಾಮ್ರ ಶೇಖರಣೆಯಾಗಿರುವುದನ್ನು ಹೊರಗೆಡವಿದರು. 

        ತಾಮ್ರ ನಮಗೆ ಅಗತ್ಯ.  ಆದರೆ ಅದು ಅತ್ಯಲ್ಪ ಪ್ರಮಾಣದಲ್ಲಿ ಸಾಕು.  ಇದು  ನಮಗೆ ಆಹಾರ ಪದಾರ್ಥಗಳ ಮೂಲಕ ಸಹಜವಾಗಿ ದೊರೆಯುತ್ತದೆ.  ಇದಕ್ಕಾಗಿ ನಾವು ವಿಶೇಷವಾಗಿ ತಾಮ್ರವನ್ನು ಸೇವಿಸಬೇಕಾಗಿಲ್ಲ.  ಚಿಕ್ಕ ಮಕ್ಕಳಲ್ಲಿ ಈ ಪ್ರಮಾಣದ ತಾಮ್ರ ಹೇಗೆ ಬಂದು ಸೇರಿತು ಎಂದು ಸಂಶೋಧಕರಿಗೆ ಅಚ್ಚರಿ ಹಾಗೂ ಕುತೂಹಲವುಂಟಾಯಿತು. 

        ಅದಕ್ಕೆ ಉತ್ತರ ಮಧ್ಯಮ ವರ್ಗದ ಹಿಂದೂ ಜನರ ಅಡುಗೆ ಮನೆಯಲ್ಲಿ ದೊರೆಯಿತು.

        ತಾಯಿ ಹಾಲು ಸಾಕಾಗದ ಮಕ್ಕಳಿಗೆ ಅಥವಾ ಬೆಳೆಯುವ ಮಕ್ಕಳಿಗೆ ಹಸುವಿನ ಹಾಲು ಶಕ್ತಿ ವರ್ಧಕ ಎಂಬ ನಂಬಿಕೆಯಿಂದ, ಮಕ್ಕಳಿಗೆ ತಾಯಂದಿರನ್ನು ಮೇಲು ಹಾಲನ್ನು ಕುಡಿಸುತ್ತಿದ್ದರು. ಹಾಲನ್ನು ಕಾಯಿಸಲು ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಇವರು ಬಳಸುತಿದ್ದರು. ಹಿತ್ತಾಳೆ ಎಂಬುದು ಒಂದು ಮಿಶ್ರ ಲೋಹ.  ಎರಡು ಭಾಗ ತಾಮ್ರ ಹಾಗೂ ಒಂದು ಭಾಗ ಸತುವಿನಿಂದ ತಯಾರಾದ ಲೋಹ.  ಇವುಗಳಿಂದ ತಾಮ್ರ ಅಂಶ ಕರಗಿ ಹಾಲನ್ನು ಸೇರುತಿತ್ತು.  ಮಕ್ಕಳೆ ಹೊಟ್ಟೆಯನ್ನು ಸೇರುತ್ತಿತ್ತು.  ಅಮೃತವೆಂದು ತಾಯಂದಿರು ಕೊಡುತ್ತಿದ್ದ ಹಾಲು ವಾಸ್ತವದಲ್ಲಿ ವಿಷವಾಗಿತ್ತು!

        ಸಂಶೋಧಕರು ತಾಮ್ರ/ಹಿತ್ತಾಳೆಯ ಪಾತ್ರೆಗಳಲ್ಲಿ ಇದ್ದ ಹಾಲಿನಲ್ಲಿ ಎಷ್ಟು ತಾಮ್ರದ ಅಂಶ ಇದೆಯೆಂಬುದನ್ನು ಪತ್ತೆ ಹಚ್ಚಿದರು.

  • ಪಾತ್ರೆಯಲ್ಲಿದ್ದ ಹಸಿ ಹಾಲು                = ೪೦ ಮೈಕ್ರೋಗ್ರಾಮ್ /ಡೆಸಿ ಲೀಟರ್.
  • ಮೊದಲ ಕಾಯಿಸಿದಾಗ                   = ೧೧೩ ಮೈಕ್ರೋಗ್ರಾಮ್ / ಡೆಸಿ ಲೀಟರ್
  • ಪದೇ ಪದೇ ಕಾಯಿಸಿದ ಹಾಲು                = ೩೫೦೦ ಮೈಕ್ರೋಗ್ರಾಮ್ / ಡೆಸಿ ಲೀಟರ್

        ಈ ಪ್ರಯೋಗಗಳಿಂದ ತಾಮ್ರ/ಹಿತ್ತಾಳೆಯ ಪಾತ್ರೆಗಳ ಮಕ್ಕಳನ್ನು ಕೊಲ್ಲುತ್ತಿದ್ದ "ದುಷ್ಟ ಶಕ್ತಿ" ಎಂಬುದು ಜಗತ್ತಿಗೆ ಗೊತ್ತಾಯಿತು.

        ಮುಂಬಯಿಯ ಕೆ.ಇ.ಎಂ ಆಸ್ಪತ್ರೆಯ ವೈದ್ಯರು ಒಂದು ಪುಟ್ಟ ಪ್ರಯೋಗವನ್ನು ಮಾಡಿದರು.  ಭಾರತದ ಮಕ್ಕಳ ಯಕೃತ್ ರೋಗದಿಂದ ಸತ್ತ ಮಕ್ಕಳ ತಾಯಂದಿರ ಮುಂದಿನ ಮಗುವನ್ನು ಪ್ರಯೋಗಕಕ್ಕೆ ಆಹ್ವಾನಿಸಿದರು.  ೧೯೮ ಮಕ್ಕಳು ಪ್ರಯೋಗದಲ್ಲಿ ಪಾಲುಗೊಂಡವು.  ಅವರಿಗೆ ಆಲ್ಯೂಮಿನಿಯಂ ಅಥವಾ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಯಲ್ಲಿ ಕಾಯಿಸಿದ ಹಾಲನ್ನು ನೀಡಿದರು.  ಆ ಮಕ್ಕಳಿಗೆ ಯಕೃತ್ ರೋಗಲಕ್ಷಣಗಳು ಕಾಣಿಸಲೇ ಇಲ್ಲ!

        ಅಂದು ಶ್ರೀಮಂತ ಹಿಂದುಗಳು ಹಾಲು ಕಾಯಿಸಲು ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆ ಬಳಸುತ್ತಿದ್ದರು.  ಬಡವರು ಮಣ್ಣಿನ ಪಾತ್ರೆ ಉಪಯೋಗಿಸುತ್ತಿದ್ದರು.  ಮಧ್ಯಮವರ್ಗದ ಜನರು ತಾಮ್ರ /ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು.  ಮುಸಲ್ಮಾನ್ ಹಾಗೂ ಕ್ರೈಸ್ಥರು ಏಕೋ ಈ ಪಾತ್ರೆಗಳನ್ನು ಬಳಸುತ್ತಿರಲಿಲ್ಲ!!  ಈಗ ನಿತ್ಯ ಅಡುಗೆಗೆ ತಾಮ್ರ / ಹಿತ್ತಾಳೆ ಪಾತ್ರೆಗಳನ್ನು ಬಳಸುವ ವಾಡಿಕೆ ನಿಂತಿದೆ.  ಎಲ್ಲೆಡೆಯೂ ಸ್ಟೈನ್‌ಲೆಸ್ ಸ್ಟೀಲ್!  ಹಾಗಾಗಿ ಭಾರತದ ಮಕ್ಕಳ ಯಕೃತ್ ರೋಗ ಈಗ ಮಾಯವಾಗಿಬಿಟ್ಟಿದೆ!

        ಈಗ ಒಂದು ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.  ಕೆಲವರು ರಾತ್ರಿ ಹೊತ್ತು ನೀರನ್ನು ತಾಮ್ರ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟು ಬೆಳಿಗ್ಗೆ ಅದನ್ನು ಬರಿ ಹೊಟ್ಟೆಯಲ್ಲಿ ಕುಡಿಯುತ್ತಾರೆ.  ಹೀಗೆ ಮಾಡಬಹುದೆ?  ಇದರಿಂದ ಆರೋಗ್ಯಕ್ಕೆ ಅಪಾಯವಿಲ್ಲವೇ?  ಖಚಿತ ಉತ್ತರ ನನಗೆ ಗೊತ್ತಿಲ್ಲ.  ಈ ಬಗ್ಗೆ ಯಾವುದೇ ಸಂಶೋದನೆ ನಡೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ.  ಬಹುಶಃ ಕಾಯಿಸದೆ ಇರುವ ನೀರಿನಲ್ಲಿ ತಾಮ್ರದ ಅಂಶ ಹೆಚ್ಚಿಗೆ ಜಿನುಗಲಾರದೇನೋ...ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಬಹುಶಃ ಇಂತಹ ಅಭ್ಯಾಸವನ್ನು ಬಿಡಬಹುದು ಎಂದು ಅನಿಸುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಆರೋಗ್ಯವರ್ಧಕ ಎಂಬುದಕ್ಕೆ ಪುರಾವೆ ದೊರೆತಿಲ್ಲ. ನಮ್ಮ ಆರೋಗ್ಯಕ್ಕೆ ಬೇಕಾದ ತಾಮ್ರದ ಪ್ರಮಾಣ ಆಹಾರ ಪದಾರ್ಥಗಳ ಮೂಲಕ ಸಹಜವಾಗಿ ದೊರೆಯುತ್ತವೆ. ಹಾಗಾಗಿ ನಾವು ತಾಮ್ರವನ್ನು ವಿಶೇಷವಾಗಿ ಸೇವಿಸಬೇಕಾಗಿಲ್ಲ.

        ಈಗ ಆಲ್ಯೂಮಿನಿಯಂ ಪಾತ್ರೆಗಳೂ ಸಹಾ ಅಡುಗೆಗೆ ಯೋಗ್ಯವಲ್ಲ ಎಂಬ ಮಾಹಿತಿ ದೊರೆಯುತ್ತಿದೆ.  ಇದು ಮಿದುಳಿಗೆ ಬರುವ ಆಲ್ಜೀಮರ್ ರೋಗಕ್ಕೆ ಕಾರಣವಾಗಬಲ್ಲುದಂತೆ!

        ಇತ್ತೀಚೆಗೆ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಕಂಡುಬಂದ ಕೆಳಗಿನ ಲೇಖನವು ತಾಮ್ರವು ಎಷ್ಟು ಮಾರಕವಾದದ್ದು ಎಂಬುವುದಕ್ಕೆ ಪುರಾವೆಯನ್ನು ನೀಡುತ್ತದೆ.

A severe copper storage disease of the liver with micronodular cirrhosis resembling Indian childhood cirrhosis (ICC) was found in two siblings of a German family leading to death in one infant at the age of 13 months. The fatal outcome correlated with severe ballooning of hepatocytes and excessive formation of Mallory bodies. The copper content of the liver was 698 micrograms per gramme wet weight (control 5 micrograms) in the living patient and 2154 micrograms per gramme dry weight (controls 39, 54 micrograms) in the dead infant. In both cases copper was stored not only in hepatocytes but also to a high degree in mesenchymal cells. Chronic contamination of drinking water supplied from a well via copper pipes could be verified as the cause of copper intoxication, lending further support to ICC as an environmental, acquired disorder. Accumulation of exogenic copper already very early in infancy appears most important for the development of the disease, as both the parents and one child not exposed to copper intoxication during the first 9 months of its life are clinically healthy.

            ಒಂದು ಪದ್ಧತಿಯು ಒಂದು ರೋಗ ಉಗಮಕ್ಕೆ ಕಾರಣವಾದರೆ, ಆ ಪದ್ಧತಿಯ ನಿಲುಗಡೆ ಆ ರೋಗವನ್ನು ಹೇಳಹೆಸರಿಲ್ಲದಂತೆ ಮಾಡಿದೆ. ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ರೋಗ ಪ್ರಕರಣ.

                                                -ಡಾ.ನಾ.ಸೋಮೇಶ್ವರ