ಇಡೀ ಕರ್ನಾಟಕದ ರಾಜಕೀಯ ವಲಯದಲ್ಲಿ ಪ್ರಳಯವನ್ನೇ ಸೃಷ್ಟಿಸಿದಂತಿದ್ದ ಮಾಡಿದ ಲೋಕಾಯುಕ್ತರ ರಾಜೀನಾಮೆ ವಿಷಯ ಅವರ ರಾಜೀನಾಮೆ ಹಿಂತೆಗೆತದಿಂದಾಗಿ ಮುಕ್ತಾಯದ ಹಂತಕ್ಕೆ ಬಂದುದು ಕೆಲವರಿಗೆ ಇರಿಸು ಮುರಿಸು ಉಂಟು ಮಾಡಿದ್ದಂತೂ ಸತ್ಯ. ಈ ಲೋಕಾಯುಕ್ತ ಜಾರಿಗೆ ಬಂದು ಅನೇಕ ವರ್ಷಗಳು, ಸರ್ಕಾರಗಳು ಗತಿಸಿದ್ದರೂ, ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡಬೇಕೆಂಬುದು ಸಂತೋಷ ಹೆಗಡೆಯವರಿಗಿಂತಲೂ ಹಿಂದಿನ ವೆಂಕಟಾಚಲಯ್ಯನವರ ಕಾಲದಲ್ಲೂ ಇದ್ದ ಬೇಡಿಕೆ ಈಗ ಏಕಾಏಕಿ ತಿರುವು ಪಡೆದುಕೊಂಡಿದ್ದು ಸತ್ಯ. ಈ ಸಮಸ್ಯೆ ಈ ಸರ್ಕಾರ ಬಂದಮೇಲೆ ಹುಟ್ಟಿದುದೆಂದು ಬಿಂಬಿಸುವಂತೆ ಸಂತೋಷ ಹೆಗಡೆಯವರೂ ನಡೆದುಕೊಂಡರು. ಎನಿಸುತ್ತದೆ. ಅದನ್ನು ಬಳಸಿಕೊಂಡು ಹಿಂದಿನ ಸರ್ಕಾರಗಳಲ್ಲಿ ಇದ್ದ ಜನಪ್ರತಿನಿಧಿಗಳೂ ತಾವು ಧರ್ಮಾತ್ಮರಂತೆ ಬಿಂಬಿಸಿಕೊಳ್ಳ ಹೊರಟಿರುವುದು, ಅದಕ್ಕೆ ಕೆಲವು ಮಾಧ್ಯಮಗಳು ಸಹ ಸಾಥ್ ನೀಡಿದ್ದು, ಇದೆಲ್ಲವನ್ನು ಮನಗಂಡ ಹೆಗಡೆಯವರು ತಮ್ಮ ರಾಜೀನಾಮೆ ನೆಪದಲ್ಲಿ ಬೇಳೆ ಬೇಯಿಸಿಕೊಂಬುವರ ಬಗ್ಗೆ ಎಚ್ಚೆತ್ತುಕೊಂಡು ರಾಜೀನಾಮೆ ಹಿಂಪಡೆದುದು, ಅದ್ವಾನಿ ಯವರ ಮಾತಿಗೆ ಕಟ್ಟು ಬಿದ್ದುದಾಗಿ ಹೇಳಿಕೊಂಡಿರುವುದು ಇವೆಲ್ಲವೂ ಈಗ ಇತಿಹಾಸ. ಇದನ್ನೇ ವಿಧಾನ ಮಂಡಲದ ಅಧಿವೇಶನದಲ್ಲಿ ಮುಖ್ಯ ವಿಷಯವಾಗಿ ಗದ್ದಲ ಎಬ್ಬಿಸುವ ಉದ್ದೇಶ ಹೊಂದಿದ ಜನ ಪ್ರತಿನಿಧಿಗಳು ವಿಧಾನ ಮಂಡಲದ ಅಧಿವೇಶನದ ಎಲ್ಲಾದಿನಗಳನ್ನೂ ವ್ಯರ್ಥಗೊಳಿಸುತ್ತಿರುವುದು. ಸಾಲದೆಂಬಂತೆ ನಿನ್ನೆ ಸದಸ್ಯರು ಕೈ ಕೈ ಮಿಲಾಯಿಸಿಕೊಂಡಿರುವುದು ಎಲ್ಲವನ್ನೂ ನೋಡಿದಾಗಿ ಸಧ್ಯದಲ್ಲಿಯೇ ಪೋಲೀಸ್ ಆಯುಕ್ತರಿಂದ ಮತ್ತೊಂದು ಬೇಡಿಕೆ ಮಂಡನೆಯಾಗಿ ಮುಂದಿನ ಅಧಿವೇಶನದ ಹೊತ್ತಿಗೆ ವ್ಯರ್ಥ ಕಾಲ ಹರಣಕ್ಕೆ ಅವಕಾಶ ಮಾಡಿಕೊಡಬಹುದೇ ಎಂಬ ಅನುಮಾನ ಪ್ರಾರಂಭವಾಗಿದೆ. ಹಾಗೆ ಬಂದಲ್ಲಿ ಆಶ್ಚರ್ಯವೂ ಇಲ್ಲ.
ಜನಸಾಮಾನ್ಯರು ಯಾವುದೇ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ಹಿಂಸಾ ರೂಪ ತಳೆದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ, ಅಶ್ರುವಾಯು, ಗಾಳಿಯಲ್ಲಿ ಗುಂಡು ಇತ್ಯಾದಿಗಳನ್ನು ಪ್ರಯೋಗಿಸುವುದು ಮಾಮೂಲು. ಹಾಗಿದ್ದಲ್ಲೂ ಪೋಲೀಸ್ ದೌರ್ಜನ್ಯದ ಕೂಗು, ಅಥವಾ ವೈಫಲ್ಯದ ಕೂಗು ಕೇಳುತ್ತೇವೆ ಜನ ಪ್ರತಿನಿಧಿಗಳಿಂದ ಅಥವಾ ಅವರ ಭಂಟರಿಂದ. ಹೀಗಾಗಿ ಮುಂದಿನ ಸದನ ಸೇರುವುದರೊಳಗಾಗಿ ಪೋಲೀಸರಿಗೆ ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಸದನವೂ ಸೇರಿದಂತೆ ಎಲ್ಲೆಡೆ ಪರಮಾಧಿಕಾರ ನೀಡಬೇಕೆಂಬ ಬೇಡಿಕೆ ಬಂದು ಅದು ನೆರವೇರದೆ ಇದ್ದಲ್ಲಿ ಆಯುಕ್ತರ ರಾಜೀನಾಮೆ ಹೀಗೆ. . . . . ಮುಂದಿನ ಅಧಿವೇಶನದ ಹೊತ್ತಿಗೆ ಜನ ಪ್ರತಿನಿಧಿಗಳಿಗೆ ವ್ಯರ್ಥ ಕಾಲಹರಣಕ್ಕಾಗಿ ಗ್ರಾಸವಾಗುವ ಮೊದಲು ಈ ಬಗ್ಗೆ ಮುಖ್ಯಮಂತ್ರಿಗಳು ದೂರದೃಷ್ಟಿ ಹರಿಸಿ ಪೋಲೀಸ್ ಆಯುಕ್ತರಿಗೂ ಪರಮಾಧಿಕಾರ ನೀಡಿ, ಸದನದಲ್ಲಿಯೂ ಮೇಲೆ ಹೇಳಿದ ಎಲ್ಲ ಕ್ರಮಗಳನ್ನು ಜರುಗಿಸಲು ಪರವಾನಗಿ ನೀಡುವುದು ಜನ ಪ್ರತಿನಿಧಿಗಳಿಗೂ ಜನತೆಗೂ ಕ್ಷೇಮವೆನ್ನುವುದು ನನ್ನ ಅಭಿಪ್ರಾಯ.ನೀವೇನಂತೀರಿ?
ಪ್ರತಿಕ್ರಿಯೆ (3)