ಇದ್ಯಾವ ಮೋಹದ ಮಾಯೆ ನಿಮ್ಮನ್ನಾವರಿಸಿದೆ ಯಡ್ಯೂರಪ್ಪನವರೇ?
ನಿಮ್ಮನ್ನು ನೀವೇ ಈ ರೀತಿ ಬಲಿಕೊಡುತ್ತಿರುವುದೇಕೆ ಹೇಳಲಾರಿರೇ?

ಮೂರ್ನಾಲ್ಕು ದಶಕಗಳ ಹೋರಾಟದ ಆ ನಿಮ್ಮ ರಾಜಕೀಯ ಜೀವನ
ಗಣಿಧೂಳಿನೊಂದಿಗೆ ಬೆರೆತು ಮರೆಯಾಗುವುದ ಕಾಣದೇ ನಿಮ್ಮ ಕಣ್ಮನ

ಯುವ ಪ್ರೇಮಿಗಳು ಹೆತ್ತವರ ಪ್ರೀತಿಯ ಮಾತನ್ನು ಕಡೆಗಣಿಸಿ ನಡೆವಂತೆ
ನೀವೂ ನಾಡಿನ ಜನತೆಯ ಮರೆತಿರಿ ಅದ್ಯಾವುದೋ ಸೆಳೆತದಲ್ಲಿರುವಂತೆ

ನಿಮ್ಮನ್ನು ಈ ರೀತಿ ಬಲಹೀನನಾಗಿಸಿಹ ಅದೃಶ್ಯ ಶಕ್ತಿ ಯಾವುದದು ಹೇಳಿ
ಸತ್ಯ ನುಡಿದರೆ ಇಡೀ ನಾಡೇ ನಿಮ್ಮ ಜೊತೆಗಿಹುದು ಸ್ವಲ್ಪ ಧೈರ್ಯ ತಾಳಿ

ಕೆಂಗಲ್, ಅರಸು, ನಿಜಲಿಂಗಪ್ಪ, ಹೆಗಡೆಯಂಥವರು ಕೂತಿದ್ದ ಘನ ಕುರ್ಚಿಯದು
ಅದರ ಘನತೆ ಕೆಡಿಸಿದರೆ ನಿಮಗೆ ಇಹ ಪರ ಎರಡೂ ಕಡೆ ನೆಮ್ಮದಿಯೇ ಸಿಗದು

ಕುರ್ಚಿಯ ಘನತೆಯನು ನೀವು ಉಳಿಸಿದರೆ ನಿಮ್ಮ ಘನತೆಯೂ ಉಳಿದೀತು
ಅದಕ್ಕೇ ಬೆಲೆ ನೀಡದಿದ್ದರೆ ಸದ್ಯದಲೇ ನಿಮ್ಮ ಬದುಕೂ ಮೂರಾಬಟ್ಟೆಯಾದೀತು

ನಾಳೆ ನೀವೊಂಟಿಯಾಗಿ ಅಳುವಾಗ ಬರಲಾರರ್ಯಾರೂ ಸಾಂತ್ವನ ಹೇಳಲು
ರಾಜಕೀಯದಲ್ಲಿ ಎಲ್ಲರ ಜೀವನ ಬಾಳೆಲೆಯಂತೆ ಬರೀ ಹಾಸ್ಯುಂಡು ಎಸೆಯಲು

ಇನ್ನಾದರೂ ನಿಮ್ಮ ನಿದ್ದೆಗೆಡಿಸುವ ನಿಮ್ಮದೇ ಮನದ ಮಾತನ್ನು ಕೇಳಿ ನೋಡಿ
ಮೈಕೊಡವಿ ಎದ್ದು ನಿಂತು ತೋರಿಸಿದರೆ ನಾಡ ಜನತೆ ಹೊಗಳುವರು ಕೊಂಡಾಡಿ

ರಾಜಕೀಯವೆಂದರೆ ಭ್ರಷ್ಟರ ಕೂಟ ಎಂದು ಇಂದು ಜನ ಆಡಿಕೊಂಡಿಹರು ನಿತ್ಯ
ಕೆಸರಿನಲ್ಲಿ ಕಮಲವೂ ಅರಳುವುದೆಂದು ತೋರಿಸಿಕೊಟ್ಟರೆ ನಿಮಗೆ ಬೆಲೆ ಸತ್ಯ
*******************
ಆತ್ರಾಡಿ ಸುರೇಶ ಹೆಗ್ಡೆ