ನಿನ್ನ ನನ್ನ ಭೇಟಿ ಬಸ್ಸಿನಲ್ಲಿ ಆಗುವ ಸಹಪ್ರಯಾಣಿಕರ ಭೇಟಿಯಂತಲ್ಲ
ಜೀವನ ಯಾತ್ರೆಯಲಿ ನಿನ್ನನ್ನಿಲ್ಲಿ ನನ್ನ ಜೊತೆಗೆ ಬಿಟ್ಟುಬಿಟ್ಟಿಹನಲ್ಲಾ?

ಕಾರಣವಿಲ್ಲದೇ ಇಲ್ಲಿ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಮಾತಿದೆ
ನಮ್ಮಿಬ್ಬರ ಸ್ನೇಹಕ್ಕೂ ಏನೋ ಕಾರಣವಿದೆ ಎಂಬ ನಂಬಿಕೆ ನನಗಿದೆ

ಯಾರೂ ಇನ್ನಾರಿಗಾಗಿ ಸುಖಾಸುಮ್ಮನೇ ತಲೆಕೆಡಿಸಿಕೊಳ್ಳುವುದಿಲ್ಲ
ಯಾರೂ ಪರರಿಗಾಗಿ ಕಾರಣವಿಲ್ಲದೇ ತಮ್ಮನ್ನೇ ಮರೆತುಬಿಡುವುದಿಲ್ಲ

ಕ್ಷಣಕ್ಷಣವೂ ಮನದೊಳಗೆ ನೆನೆನೆನೆದು ಪಡುವ ಸುಖಾನುಭವವದೇನು?
ತನ್ನ ಮನದ ಮಾತನ್ನೆಲ್ಲಾ ಸತತ ಹಂಚಿಕೊಳ್ಳಬೇಕೆಂಬ ತವಕವದೇನು?

ನಮ್ಮೀ ಸ್ನೇಹಬಂಧದ ಹಿಂದೆ ಆ ಭಗವಂತನಿಗಿರುವ ಉದ್ದೇಶ ಏನೆಂದರಿತಿಲ್ಲ
ಆದರೆ ಇದಕೇನೋ ಮಹತ್ವವಿದೆಯೆಂಬ ಅರಿವು ನಮ್ಮೀರ್ವರಿಗೂ ಇದೆಯಲ್ಲಾ?

ನಮ್ಮ ಸ್ನೇಹದಿಂದ ನಮಗಲ್ಲ ಈ ಸ್ನೇಹಕ್ಕೇ ಆಗುವಂತಾಗಲಿ ಪ್ರಯೋಜನ
ನಾವಳಿದ ಮೇಲೆಮ್ಮ ಸ್ನೇಹದ ಬಗ್ಗೆ ಮಾತಾಡುವಂತಾಗಲಿ ಇಲ್ಲಿಯ ಜನ!
************************************
ಆತ್ರಾಡಿ ಸುರೇಶ ಹೆಗ್ಡೆ