ಬದುಕು ಜಟಕಾ ಬಂಡಿ ಇರಬಹುದು

ಆದರೆ ಕಾಲ ಲಗಾಮಿಲ್ಲದ ಕುದುರೆ

ಕಬ್ಬಿನ ಜಲ್ಲೆಯ ಮೇಲೆ ಮಲಗಿದರೂ

ಎದೆಯೊಳಗಿನ ಕಹಿ ಕರಗೀತೆ ?

ಪಲ್ಲಕ್ಕಿ ಹೊತ್ತ ನಂತರವೂ

ಬೆವರು ಹರಿಯುವ ಝರಿ

ಆಯಾಸಕ್ಕೆ ಸಂದ ಉಡುಗೊರೆ !

ನಡೆಯುವಾಗ ನೀನೆ ಎಡವಬಹುದು

ಬೇರೆಯವರು ಕಾಲೆಳೆಯಬಹುದು

ಬಿದ್ದುಕೊಂಡ ದಾರಿಗೆ ಬಾಯಿಲ್ಲ ತಿಳಿ.

ಮರೆಯಲ್ಲೆಲ್ಲೋ ಸಾವು

ಹೆದರಿ ಕಚ್ಚುವ ಹಾವು.

ಸತ್ತ ತಾಯಿಯ ಮೊಲೆ ಹೀರುತ್ತಿರುವ

ಹಸಿದ ಕೂಸು ಹುಚ್ಚುಖೋಡಿ !

ಆದರೆ ಬದುಕು ಪೇರಿಸಿಟ್ಟ ಗೋರಿಗಳ ಮೇಲಿಂದ

ಶುಭ ಕೋರಿ ನಗುತ್ತವೆ ಹೂಗಳು

ಯಾತ್ರೆ ಹೊರಟವನ ನೋಡಿ..

(ಈ ಕವಿತೆಯನ್ನು ನಾನು ಮೊದಲ ಬಾರಿ ಮನೆ ಬಿಟ್ಟು ಧಾರವಾಡಕ್ಕೆ ಹೋಗುವಾಗ ರಚಿಸಿದ್ದು ೨೦೦೨ ರಲ್ಲಿ )