ಅಪ್ಪಾ.....
'ಹೋಗದಿರು ಅಲ್ಲಿ ನೋಡದಿರು ಇಲ್ಲಿ"
ಎಂಬುದೇ......
ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ !
'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು"
ನೀನೇ ಇನ್ನಾರಿಗೋ ಹೇಳಿದ ಮಾತು
ನಿನ್ನ ಕಂದಾಚಾರದ ಬೇಲಿಯೊಳಗೆ
ನಾನು ಮಾತ್ರ ಮುಕ್ತತೆಯ ಕಾಣಬೇಕೆಂಬ
ಅಹಮ್ಮು....ನಿನ್ನದೇ ?
ನೆನಪಿದೆಯೇ ನಿನಗೆ...
ಈ ವಯದ ಆಸೆ ಆಕಾಂಕ್ಷೆ, ಕನಸು
ನೀನೇ ಎಡವುತ್ತ ದಾಟಿ ಬಂದಿಹೆ ಎಂದು.
ನಿನ್ನ ಹದಿಹರೆಯದ ತುಂಟಾಟ..
ಅಮ್ಮ...ಗುಟ್ಟಾಗಿ ಹೇಳಿಹಳು.!
ಅದನೆಲ್ಲ ಮರೆತು ಎದೆಯಲಿ
ಬಚ್ಚಿಟ್ಟುಕೊಂಡ ಕ್ಷಮಾಶೀಲೆ !
ಈಗ ನಿನಗೆ ನಾ..ಬೆತ್ತಲಾಗುವ ಭಯವೇ?
ನಿನ್ನ ಇಂದಿನ ... !
ಅಭಿಮಾನಕ್ಕೆ ಕುಂದು ತರದೆ
ಸ್ವಚ್ಛಮನದಲಿ ನನ್ನ
ಕನಸಿಗೆ ರೆಕ್ಕೆ ಕಟ್ಟುವೆ.
ಈಗಾದರೂ ...ದಾರಿ ಬಿಡುವೆಯಾ ?
ಪ್ರತಿಕ್ರಿಯೆ (3)