ಇನ್ನು ಏನಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?
ಇನ್ನು ಹೇಗಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?

ಎಲ್ಲ ಬರಹಕ್ಕೂ ಇನ್ನು ಸಮಾನ ಪ್ರತಿಕ್ರಿಯೆಗಳು
ಇದರಲ್ಲಿವೆ ನೋಡಿ ಈ ಎರಡು ಪ್ರಯೋಜನಗಳು

ತಪ್ಪುಗಳ ತಿದ್ದಿದರೆ ಮನ ನೋಯಿಸಿಕೊಳ್ಳುವರಲ್ಲ?
ಹೊಗಳಿಸಿಕೊಂಡವನು ಇನ್ನೂ ಬರೀತಾನಂತಲ್ಲಾ?

ಮಾಂಸಾಹಾರ ಮಾಡಿದರೆ ಮಾತ್ರ ಅದ ತಪ್ಪು ಅನ್ನಿ
ಆ ತಪ್ಪನ್ನು ಜಗಕ್ಕೆ ತೋರಿಸಲು ಎಲ್ಲಾ ಒಟ್ಟು ಸೇರಿ ಬನ್ನಿ

ಭಾಷೆಯ ಮೇಲಾಗೋ ಅತ್ಯಾಚಾರಕ್ಕೆ ಮಾತ್ರ ಜೈ ಅನ್ನಿ
ಅದನ್ನು ಹೇಳಿದರೆ ಬರೆದವರ ಮನಸ್ಸು ನೋಯುತ್ತದನ್ನಿ

ತಪ್ಪು ಒಪ್ಪುಗಳ ವಿಮರ್ಶೆ ನಡೆದರೆ, ಅದು ಅಲ್ಲ ಅಬ್ಬರ
ಸಾಹಿತ್ಯ ಕೃಷಿಯಾಗದೇ, ಸೇರುವುದಿಲ್ಲಿ ಬರೀ ಗೊಬ್ಬರ

ಜಗದ ತಪ್ಪುಗಳನ್ನು ತೋರದ ಪತ್ರಿಕೆಗಳಿಗಿದೆಯೇ ಬೇಡಿಕೆ?*
ಅನ್ಯರಿಗೆ ನೆರವಾಗದ ಮನುಜನಿಗೆ, ನಿಜದಿ, ಮಾತು ಬೇಕೆ?

ತಪ್ಪನ್ನು ತೋರಿಸಿದವರೇ ನಮಗೆ ಇಲ್ಲಿ ವೈರಿಗಳೇ?
ನಮ್ಮನ್ನು ಹೊಗಳಿ ಹಾಳು ಮಾಡಿದವರು ಹಿತೈಷಿಗಳೇ?
***********
ಆತ್ರಾಡಿ ಸುರೇಶ ಹೆಗ್ಡೆ

 

*ಜಗದ ತಪ್ಪುಗಳನ್ನು ತೋರದ ಪತ್ರಿಕೆಗಳಿಗಿದೆಯೆ ಬೇಡಿಕೆ? - ದಿನಾ ಬೆಳಗಾದರೆ ನಾವು ಪತ್ರಿಕೆಗಳಲ್ಲಿ ಓದುವುದು ಅವರಿವರ ಕರ್ಮಕಾಂಡದ ಸುದ್ದಿಯೇ ತಾನೇ? ಅಂಥ ಸುದ್ದಿಗಳಿಗೇ ಈಗ ಬೇಡಿಕೆ. ಬರೀ ಅವರಿವರನ್ನು ಹೊಗಳಿ ಬರೆಯುವ ಪತ್ರಿಕೆಗಳನ್ನು ಎಷ್ಟು ಮಂದಿ ಓದಲು ತಯಾರಿರುತ್ತಾರೆ?