ರಜಾದಿನಗಳಲ್ಲಿ ಊರಿಗೆ ಹೋಗುವುದೇ ಹಬ್ಬ. ಆದರೆ ಅದಕ್ಕೂ ಮುಂಚೆ "ಮೆಜೆಸ್ಟಿಕ್" (ಬೆಂಗಳೂರು ಬಸ್ ನಿಲ್ದಾಣ)ಗೆ ಹೋಗುವುದು, ಅಲ್ಲಿ ನಾವು ಟಿಕೆಟ್ ಬುಕ್ ಮಾಡಿದ ಬಸ್ ಹುಡುಕುವುದು, ಆ ಬಸ್ ಮೆಜೆಸ್ಟಿಕ್‌ನಿಂದ ಹೊರಬರುವುದು.......ಅಬ್ಬಾ.. ಅಬ್ಬಬ್ಬಾ.

ಬಸ್ ಹೊರಟ ಮೇಲೆ ಹಾಯಾಗಿ ನಿದ್ರೆ ಮಾಡಿ...ಎಚ್ಚರವಾದಾಗ ನೋಡಿದರೆ ಬಸ್ ಇನ್ನೂ ಮೆಜೆಸ್ಟಿಕ್ ದಾಟಿರುವುದಿಲ್ಲ!

ಕರ್ನಾಟಕ ಸಾರಿಗೆ" ಬಸ್‌ನ ಹೆಸರುಗಳೆಲ್ಲಾ ಚೆನ್ನಾಗಿದೆ. "ಐರಾವತ"-ಅದರ ಮಾವುತ(ಡ್ರೈವರ್)ನ ಅವಸ್ಥೆ ಯಾರಿಗೂ ಬೇಡ. ಘೀಳಿಟ್ಟರೂ(ಹಾರ್ನ್) ಕಾರು, ಬೈಕು ಬಿಡಿ ಪಾದಚಾರಿನೂ ಪಕ್ಕಕ್ಕೆ ಸರಿಯುವುದಿಲ್ಲ. ದಸರಾದ ಆನೆ ತರಹ ನಿದಾನಕ್ಕೆ ಚಲಿಸಬೇಕು.

ಮೆಟ್ರೋ ರೈಲು ಬಂದ ನಂತರ ಪರಿಸ್ಥಿತಿ ಸುಧಾರಿಸಬಹುದು... ರೈಲು ಅಂದಾಗ ನನಗೆ ಬಾಲ್ಯದ ನೆನಪಾಯಿತು. ಕೆಳಗಿನ ಚಿತ್ರದಲ್ಲಿರುವುದನ್ನು ನಾವು ರೈಲು ಅಂತಿದ್ದೆವು. (ಈ ಕಾಲದಲ್ಲಿ ಇದನ್ನು ಮನೋರೈಲು ಅನ್ನಬಹುದು. ಇದಕ್ಕಿಂತ ಗಾತ್ರದಲ್ಲಿ ದೊಡ್ಡದಿರುವುದು ಮೆಟ್ರೋ)

ಮಳೆ ಜೋರಾಗಿದ್ದುದರಿಂದ ಈಸಲ ಊರಲ್ಲಿ ಎರಡು ಪಾದಗಳ ಮಿತ್ರರ ಭೇಟಿಯಾಗಲಿಲ್ಲ. ಆ ಮಳೆಯಲ್ಲೂ ಕೆಲ(some)ಪಾದಗಳ ಮಿತ್ರರು ನನ್ನನ್ನು ಹುಡುಕಿಕೊಂಡು ಬಂದಿದ್ದರು. ಅದರಲ್ಲಿ ಮೇಲೆ ವಿವರಿಸಿದ ಮೊನೋರೈಲು ಸಹ ಒಂದು.

ಹಬ್ಬದ ಟೈಮಲ್ಲಿ ಊಟಕ್ಕೆ ಬಾಳೆ ಎಲೆನೇ ಆಗಬೇಕು. ತೋಟಕ್ಕೆ ಹೋಗಿ ಬಾಳೆ ಎಲೆ cut ಮಾಡಿದಾಗ ನನಗಿಂತ ಮೊದಲೇ ಈ ಪ್ರಾಣಿ ಊಟಕ್ಕೆ ರೆಡಿಯಾಗಿತ್ತು. ಮಿತ್ರನನ್ನೇ ಪ್ರಾಣಿ ಎನ್ನುವುದೇ ಅಂದಿರಾ? ನಾವು ಅಷ್ಟು close (ಇದ್ದೆವು). ಎಲೆಗಂಟಿಕೊಂಡಿದ್ದ ಇದನ್ನು ಅಡಿಮೇಲು ಮಾಡಿ ಪಾದಗಳನ್ನು ಹುಡುಕಿದೆ. "ಹೇಳಿದ ಕೆಲಸ ಒಂದೂ ಸರಿ ಮಾಡುವುದಿಲ್ಲ..ಡಾಂ...ಡೂಂ.." ಎಂದು ಮಿತ್ರನನ್ನು ಎಸೆದು ಎಲೆಯನ್ನು ಕಸಿದುಕೊಂಡು ಹೋದರು :(

ನನಗೇನು ಮಿತ್ರರ ಬರವೇ! ನನ್ನ ಕೈಯನ್ನು ಯಾವುದೋ ಗಿಡದ ರೆಂಬೆ ಎಂದು ತಿಳಿದು ಈ ಮಿತ್ರ ಹಾರಿ ಬಂದು ಕುಳಿತ. ಮೆಲ್ಲನೇ ಮೇಲೆತ್ತಿ ಗೋಡೆಯ ಬ್ಯಾಕ್‌ಗ್ರೌಂಡ್‌ಗೆ ಫೋಟೋ ತೆಗೆಯೋಣವೆಂದರೆ ಪಕ್ಕಕ್ಕೆ ತಿರುಗಿ ಹಾರಿ ಹೋದ....

ಮನೆಗೆ ಹೋಗಿ ಊಟ ಮಾಡಿ ಹಾಯಾಗಿ ಮಲಗಿದೆ. ಸಂಜೆ ಎದ್ದಾಗ ನನ್ನ ಪಕ್ಕದಲ್ಲಿ ಈ ಕೀಟವಿತ್ತು. ಬಣ್ಣಬಣ್ಣದ ಕೀಟ. ಓಡಾಡುತ್ತಿರಲಿಲ್ಲ. ಸುಸ್ತಾಗಿರಬೇಕೆಂದು ಅವಲಕ್ಕಿ,ಸ್ವೀಟ್‌ಗಳ ತುಣುಕು ಹಾಕಿದೆ. ಮುಟ್ಟಲಿಲ್ಲ. ಪೇಪರ್‌ನಲ್ಲಿ ಎತ್ತಿಕೊಂಡು ಹೋಗಿ ಗಿಡದ ಮೇಲೆ ಬಿಟ್ಟೆ. ಎಲೆಮೇಲಿದ್ದ ನೀರನ್ನು ಕುಡಿದು ಸ್ವಲ್ಪ ಚುರುಕಾಯಿತು. ಎರಡು ದಿನದಿಂದ ಆ ರೂಮಲ್ಲೇ ಹಾರಾಡುತ್ತಿತ್ತೆಂದು ಮಕ್ಕಳು ಹೇಳಿದರು. ಮಳೆಗೆ ರೂಮಿನ ಕಿಟಕಿಗಳನ್ನೆಲ್ಲಾ ಮುಚ್ಚಿದ್ದರಿಂದ ಅದಕ್ಕೆ ಹೊರಗೆ ಹೋಗಲಾಗಿರಲಿಲ್ಲ.

ರಾತ್ರಿ ಭೇಟಿಯಾಗಲು ಬಂದವನನ್ನು ನೋಡದೇ ಅನೇಕ ವರ್ಷಗಳಾಗಿತ್ತು. ನಾವು ಚಿಕ್ಕವರಿದ್ದಾಗ ಇದು ಮನೆಯೊಳಗೆ ಬಂತೆಂದರೆ ನಾವು ಬರೆಯುತ್ತಿರುವ ನೋಟ್‌ಬುಕ್‌ನ್ನೇ ಬ್ಯಾಟ್‌ನಂತೆ ಮಾಡಿ ಬೀಸಿ ಹೊಡೆಯುತ್ತಿದ್ದೆವು.

ಇಷ್ಟು ಸಾಕಲ್ವಾ..

-ಗಣೇಶ.