ಎಂದೋ ಮರೆತ ಮನದ ಹಾದಿಯಲ್ಲಿ
ಅರಳುತ್ತಿವೆ ಹೂಗಳು ನಿಟ್ಟುಸಿರ ಚೆಲ್ಲಿ...
ಲೆಕ್ಕವಿರದ ನೆನಪುಗಳ ತುಂಬಿಕೊಂಡು
ಕಣ್ ಮುಚ್ಚಿ ಕಲ್ಪಿಸುವ ಮೌನ ಹೃದಯ ..
ಬದುಕ ಬಾನ ತುಂಬಾ
ಮಿನುಗದ ನಕ್ಷತ್ರಗಳದ್ದೆ ಅಧ್ಯಾಯ...!
ಆ ನಕ್ಷತ್ರಗಳ ನೆರಳಲ್ಲಿ ಕಾದು ಕನವರಿಸಿ
ಮತ್ತೆ ಬಾಡುವ ಹೂವುಗಳದು ಭಾವಪೂರ್ಣ ವಿದಾಯ...
ಬೆಳಗ್ಗೆ ಎದ್ದು ನೋಡಿದರೆ
ಹೂವ ಮೇಲೆಲ್ಲಾ ಕಣ್ಣೀರ ಸಿಂಚನ
ಪುನಃ ವಾಸ್ತವತೆಯ ಧೂಳು ಮೈ ಮೇಲೆಲ್ಲಾ..
ಬಂದೀತೆ ಎಂದಾದರೊಂದು ದಿನ
ಭರವಸೆಯ ಗಾಳಿ, ಮಳೆ....?1
ಎಲ್ಲ ಕಹಿನೆನಪುಗಳು ತೂರಿ
ನಿರ್ಮಲವಾದೀತೇ ಮನಸ್ಸೆಂಬ ಇಳೆ...
ಈಗ ರಾತ್ರಿಯಲ್ಲಿ ಬೆಳದಿಂಗಳ ಅದೇ ಮುಗ್ಧ ನಗು...
ಗೊತ್ತು ಬಿಡು,ಕಳೆದ ಕ್ಷಣಗಳ ನೆನಪೆಂದೂ ಮಾಸದಿಲ್ಲಿ,
ಬಂದೆ ಬರುವುದು ಮತ್ತೆ ನಾಳೆಯ ಬೆಳಗು.....!
ಪ್ರತಿಕ್ರಿಯೆ (10)