ಮನಸಿನೊಳಗೊಬ್ಬ ಮನುಜನಿದ್ದಾನೆ ,

ಸುತ್ತ ಕತ್ತಲೆ, ಪೂರ್ತಿ ಬತ್ತಲೆ !

ನಾಚುತ್ತಿರಲಿಲ್ಲ  ಈತ ,ನಾಚುವುದಾದರೂ ಏನಕ್ಕೆ

ತಪ್ಪೆಲ್ಲ ಮಾಡಿ ಹುಸಿ ನಗೆಯಲ್ಲಿ ಕೂತಿಲ್ಲವಲ್ಲ !

 

ಜಗವ ಮೋಸ ಮಾಡಿಲ್ಲ ಅವನು !

ಆದರೂ ಹೆದರುತ್ತಾನೆ ,

ಜಾಸ್ತಿ ತಲೆ ಹಾಕಿದಲ್ಲಿ ,ತಲೆ ತೆಗೆಯಲೂ ಹೇಸನು

ಇವನ ಒಡೆಯ !

 

ಬಾಲ್ಯದಲ್ಲಿ ಇಬ್ಬರೂ ಒಳ್ಳೆ ಗೆಳೆಯರು

ಕಾಲ ಕೆಟ್ಟಿತೋ, ಮನುಜ ಕೆಟ್ಟನೋ

ಬತ್ತಲೆ ಮನುಜನ ಸಂಗ ಅವನಿಗ್ಯಾಕೋ ಬೇಡವಾಯ್ತು

ಬತ್ತಲೆ ಎಂದಲ್ಲ , ಇವನ ಬತ್ತಲೆ ಮಾಡುತ್ತಾನಲ್ಲ ಎಂದು !

 

ತಪ್ಪು ಮಾಡುತ್ತಾನೆ ಅನ್ನುವ ಕಾರಣವಲ್ಲ ,

ಬತ್ತಲೆ ಮನುಜನ ಬೇಸರ.

ಮಾಡಿದ ತಪ್ಪೇ ಸರಿ ಅನ್ನುತ್ತಾನಲ್ಲ,

ಕೆಟ್ಟಿದ್ದೆ ಒಳ್ಳೆದಾಯ್ತು ಅನ್ನುತ್ತಾನಲ್ಲ !!

 

ಮೊದಮೊದಲು ಸ್ನಾನ ಗೃಹದಲ್ಲಿ

ಹೆದರುತ್ತಿದ್ದ ಬತ್ತಲಾಗದ ಮನುಜ !

ಹೆದರಿಯೇ ಸಿದ್ದ ,

ಇಲ್ಲಿ ಇಬ್ಬರೂ ಬತ್ತಲಲ್ಲವೇ !!

 

ಈಗ ಸ್ನಾನ ಅಂದರೆ ಒಳಗಿರುವವನು ಬೆಚ್ಚುತ್ತಾನೆ

ಹೊರಗಿರುವವನು ಕೇಳ ಹತ್ತಿದ್ದಾನೆ, ನೀನ್ಯಾಕೆ ನನ್ನ ಮಾತು ಕೇಳುತ್ತಿಲ್ಲ !

ನಾನೂ ಬಟ್ಟೆ ಹಾಕುವನ್ತಿದ್ದರೆ ,ಮಾನ ಉಳಿಯುವುದೇನೋ ,

ಒಳಗಿರುವವನಿಗೆ ಸ್ನಾನ ಗೃಹದಲ್ಲೂ ಈಗ ನಾಚಿಕೆ !!

--

(ಮನಸಿನ ದ್ವಂದ್ವ ಕ್ಕೆ ಲಾಟೀನು ಹಾಕಿ ಮುಂದಕ್ಕೆ ಹೋಗುವವನ ವ್ಯಥೆ !)

ಪ್ರವೀಣ ಸಾಯ