ಸಣ್ಣಗೆ ಉರಿಯುತ್ತಿದೆ ದೀಪ,

ಅ೦ತರಾತ್ಮದ ದೀಪ.

 

 ಕುಸಿದ ಜೀವನ ಮೌಲ್ಯಗಳಿ೦ದ

ದೀಪದ ಸುತ್ತಲೂ

ಕಪ್ಪು ಧೂಮ ಕವಿದು

ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ!

ಕೆಲ ದೀಪಗಳು ಹೇಳಹೆಸರಿಲ್ಲದೆಯೇ

ಅಳಿಯುತ್ತಲಿವ.

 

ಇನ್ನು ಹಲವು ದೀಪಗಳು

ಸೂರ್ಯನೆತ್ತರಕ್ಕೆ ಪ್ರಜ್ವಲಿಸುತ್ತಿವೆ.

ಬುದ್ಧನದೋ? ವಿವೇಕನದೋ? ಇನ್ಯಾವ ಮಹಾತ್ಮನದೋ?..

ಅರೆರೇ! ಇದೇನಿದು ಆಶ್ಚರ್ಯ!

ಈ ದೀಪಗಳ ಬುಡದಲ್ಲಿ

ನೆರಳೇ ಇಲ್ಲ!

 

ಇನ್ಕೆಲವು ಜ್ಯೋತಿಗಳು ಒದ್ದಾಡುತ್ತಲಿವೆ

ತಮ್ಮ ಬುಡಮೂಲದ ನೆರಳ ಬೇರಲ್ಲಿ ಸಿಲುಕಿ.

ಇವಕೆ ಎಷ್ಟೊ೦ದು ಇತಿ-ಮಿತಿಗಳು!

ಹಪಹಪಿಸುತ್ತಿವೆ ಈ ದೀಪಗಳು

ಮಾರ್ಗದರ್ಶನದ ಪ್ರಭೆಗಾಗಿ,

ಸುತ್ತಲಿರುವ ಅಧಮತೆ

ಯಾರ ಸಹಾಯಹಸ್ತಕ್ಕೂ ಎಡೆಗೊಡುತ್ತಿಲ್ಲ.

 

 ಬಾಳ ಹಣತೆಯ ಬತ್ತಿಯನ್ನು

ನಿಷ್ಠೆಯಲಿ ಹೊಸೆಹೊಸೆದು, 

ಜೀವನಾಮೃತರಸದ ಎಣ್ಣೆಯೆರೆದು,

ಜ್ಯೋತಿಯನ್ನು ಹಚ್ಚೋಣ.

ಪ್ರತಿಯೊಬ್ಬರ ಕಣ್ಗಳಲಿ ಬೆಳಗಲಿ

ಅವರವರ ಅ೦ತರಾತ್ಮ.

 

-ಪ್ರಸನ್ನ