ಜೀವಕ್ಕಟ್ಟಿಕೊಂಡೇ ಸಾವಿನಿರವು

ಅನುಭವಕೆ ನಿಲುಕುವ ಅರಿವು.

ಮರಣದಾಚೆಗಿನ ಬದುಕು

ಅವರವರ ನಂಬಿಕೆಯ ಮಾತು.

 

ಬಯಸಿ ಬೆನ್ನಟ್ಟಿದರೆ

ಖಾತ್ರಿಯಿಲ್ಲ ದಕ್ಕುವುದು.

ಹೆದರಿ ಓಡಿದರೆ

ಸಾಧ್ಯವಿಲ್ಲ ಪಾರಾಗುವುದು.

 

ಸಾವಿನೊಂದಿಗೆ ಬದುಕು ಕೊನೆ

ಎಲ್ಲ ಜೀವ ಜಂತುಗಳಿಗೆ.

ಸತ್ತ ಮೇಲೂ ಉಳಿವ

ಕೀರ್ತಿಕಾಮನೆ ಮನುಜನಿಗೆ.

 

ಹುಟ್ಟುತ್ತಲೇ ಜೊತೆಯಾದ

ಬತ್ತಲೆ ಮಿತ್ರ ಸಾವು.

ಕೊನೆಯ ಘಳಿಗೆಯವರೆಗೂ

ದೊರಕದಿವನ ಒಲುಮೆ.

 

ಇಚ್ಛಾಮರಣಿಯಾಗಲು

ಭೀಷ್ಮವ್ಯಕ್ತಿತ್ವ ಬೇಕು.

ಆತ್ಮಹತ್ಯೆ ಮಾಡಿಕೊಳ್ಳಲು

ದುರ್ಬಲ ಕ್ಷಣ ಸಾಕು.