ಎಪ್ಪತ್ತು ಲಕ್ಷ ರೂಪಾಯಿ ವ್ಯವಹಾರ. ಒಬ್ಬ ವ್ಯವಹಾರಸ್ಥ ಇನ್ನೊಬ್ಬರಿಗೆ ಚೆಕ್ ಕೊಡುತ್ತಾರೆ; ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ತಿರಸ್ಕರಿಸುತ್ತದೆ. ವಿವಂಚಿತರ ಫಿರ್ಯಾದು; ಪೊಲೀಸರು ಉತ್ತರದಾಯಿಯನ್ನು ಬಂಧಿಸುತ್ತಾರೆ... ಇತ್ಯಾದಿ ದಿನನಿತ್ಯದ ಕ್ರೈಮ್ ರೌಂಡ್ನಲ್ಲಿ ಇಂಥಾ ಎಷ್ಟು ಮಾಹಿತಿಗಳೋ... ಚೆಕ್ ಕೊಟ್ಟವರು ಒಬ್ಬ ಪೀಠಾಧಿಪತಿಯಾಗಿದ್ದರು ಎನ್ನುವುದು ಈಗಿನ ಹೆಚ್ಚುಗಟ್ಟಲೆ. ಸ್ವಾಮಿ ಪೀಠತ್ಯಾಗ ಮಾಡಬೇಕೆಂದು ಶ್ರೀಮಠದ ಶಿಷ್ಯರೆಂಬ ಹಲಕೆಲವರ ಪಟ್ಟು. ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು ಜೋಕೆ ಎಂದು ಈ ಮಾಧ್ವರು ಎಚ್ಚರಿಕೆ ನೀಡಿದ್ದು ಸ್ವಾರಸ್ಯ!
ಹಲವು ಮಾಧ್ವರ ಒಂದು ದಿನದ ಹರಿದಿನ ಆಚರಣೆಗಾದರೂ ಈ ಮೂಲಕ ಅವಕಾಶ ಮಾಡಿಕೊಟ್ಟ ಸ್ವಾಮಿಗಳು ಪರೊಕ್ಷವಾಗಿ ಧನ್ಯರೇ ಆಗಿಬಿಡುತ್ತಾರೆ!
ಅನೂಚಾನ ಮಠಗಳ ಸ್ವಾಮಿಗಳಾದವರು ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಅಥಾರಿಟಿಯೂ, ಮೇಲ್ಪಂಕ್ತಿಯೂ ಆಗಬೇಕಾದವರು. ಅಂಥವರು ಲಕ್ಷ-ಕೋಟಿಗಳ ಲೌಕಿಕ ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಾಗಲೇ ಅವರ ನೈತಿಕ ಹೊಣೆಗೇಡಿತನ ರಾಜಾರೊಷವಾಗಿಬಿಡುತ್ತದೆ! ಯಾವಾಗಲೋ ವ್ಯಾವಹಾರಿಕ ಅಚಾತುರ್ಯದಿಂದ ಒಂದು ಚೆಕ್ ಹಾರಿಬೀಳುವುದನ್ನೇ ಕಾದಿದ್ದು, ಅವರು ಪೀಠವನ್ನೇ ಬಿಟ್ಟುಬಿಡಬೇಕೆಂದು ಪಟ್ಟು ಹಿಡಿಯುವುದು, ಸಾತ್ವಿಕತೆಯನ್ನಲ್ಲ, ಪಟ್ಟಭದ್ರತೆಯನ್ನು ಮಾತ್ರಾ ಪ್ರದರ್ಶಿಸೀತು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!