ಮತ್ತೆ ನೆನೆಪಿಗೆ ಜಾರುವುದು ಏಕೆ?
ಮನ ಮುದ್ದಿನ ಬಾಲ್ಯಕೆ
ಕೊಯ್ಯಲೆಂದು ಜಾಜಿ ಮಲ್ಲಿಗೆ
ತೋಟದೊಳಗೆ ನುಗ್ಗಲು ಮೆಲ್ಲಗೆ
ಜೇನು ಕಚ್ಚಿ ಮುಖ ದಪ್ಪವಾಗೆ
ಎಲ್ಲರಿಂದ ಛೇಡಿಸಿಕೊಂಡಾ
ಕೀಳಲೆಂದು ನೇರಲೆ ಪೇರಲೆ
ಮರವ ಹತ್ತಿ ಮಾಡಿ ತರಲೆ
ಕೆಳಗೆ ಬಿದ್ದು ಟೊಂಗೆ ಜೊತೆಯಲೆ
ತಿಂಗಳಿಡಿ ಕುಂಟುತ ನಡೆದಾ
ಅಕ್ಕನೊಡನೆ ಜಗಳವಾಡಿದ
ಪಂಥ ಕಟ್ಟಿ ಹುಳಿಮಾವು ತಿಂದ
ಸಖಿಯರೊಡನೆ ನಕ್ಕು ನಲಿದ
ಮೌನ ನಮಗೆ ದೂರವೆಂದಾ
ನದಿಯ ನೀರಲಿ ಈಜಾಟ
ದಡದ ಮರಳಲಿ ಜೂಟಾಟ
ದಂಡೆ ಮೇಲಿನ ಬೆಳದಿಂಗಳೂಟ
ಹರಟೆ ಹಾಡು ವಿನೋದ ತುಂಬಿದಾ
ಸೊಂಪು ನಿದ್ರೆ ಕೈತುತ್ತೂಟ
ಪಾಠಕಿಂತ ಹೆಚ್ಚಿನ ಆಟ
ಅಮ್ಮನ ಅಕ್ಕರೆಯ ನೋಟ
ಪ್ರಕೃತಿಮಾತೆ ಸಿರಿ ಸೊಬಗುಂಡಾ
ಕಳೆದ ಬಾಲ್ಯ ಮತ್ತೆ ಬರದು
ನೆನಪು ಮಾತ್ರ ಎಂದೂ ಅಳಿಯದು
ಮಧುರ ಭಾವ ಸದಾ ಉಳಿವುದು
ನೆನಪು ಮನಕೆ ಹುರುಪು ತರುವುದು.
ಹುರುಪು ತರುವ ನೆನಪು
ಪ್ರತಿಕ್ರಿಯೆ (2)