ಯುಗಾದಿಯಿಂದ ಯುಗಾದಿಯವರೆಗೆ
ಹಾಸಿಕೊಂಡಿವೆ ಹರಡಿಕೊಂಡಿವೆ
ಎಷ್ಟೊಂದು ಎಷ್ಟೊಂದು ಕನಸುಗಳು
ಎಷ್ಟೊಂದು ಆಸೆಗಳು ನಿರೀಕ್ಷೆಗಳು.
ಹಿಂದಕ್ಕೆ ತಿರುಗಿ ನೋಡಿದರೆ
ದಾರಿಬದಿಯಲಿ ತಬ್ಬಲಿ ಕನಸುಗಳು
ಬಾವಲಿಯಂತೆ ಜೋತಾಡುವ
ಆಸೆಗಳು ನಿರೀಕ್ಷೆಗಳು.
ಆಷ್ಟಿಷ್ಟು ನಲಿವುಗಳು
ಒಂದಿಷ್ಟು ನೋವುಗಳು
ಜೊತೆ ಜೊತೆಗೆ ನೊಂದಾಗ
ಸಾಂತ್ವನ ಹೇಳಿದ ಮನಸುಗಳು.
ಮುಂದಕ್ಕೆ ದಿಟ್ಟಿ ಹರಿಸಿದರೆ
ಕಾದ ಕಾವಲಿಯ ಮೇಲೆ
ತತಾ ತೂತಿನ ದೋಸೆ
ಹುರಿವ ಬಾಣಲೆ, ಬಿಟ್ಟರೆ ಉರಿವ ಬೆಂಕಿ.
ಯುಗಾದಿಯಿಂದ ಯುಗಾದಿಯವರೆಗೆ
ಆಸೆ ನಿರೀಕ್ಷೆಗಳ ನೇಯುತಲಿರಬೇಕು
ಅಜ್ಜನ ಕೋಲನು ಕುದುರೆಯಾಗಿಸಿ
ಓಡುತಲಿರಬೇಕು
ಕನಸು ಕಾಣುತ್ತಲೇ
ಬದುಕಿರಬೇಕು.
ಽಽಽಽಽ******
ಎಲ್ಲರಿಗೂ ಖರ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
ಪ್ರತಿಕ್ರಿಯೆ (1)