ಸರ್ಕಾರಿ ಕಛೇರಿಗಳಲ್ಲಿ

ಕುರ್ಚಿಯ ಮೇಲೆ ಕೂತ

ಮೈಗಳ್ಳರೂ ಸೋಮಾರಿಗಳೂ

ಕೆಲಸ ಮಾಡಲು ಹಾಗು ಮಾಡದಿರಲು

ಲಂಚ ಪಡೆಯುತ್ತಾರೆ.

ದೇಶದ ಕರಾಳ ಭವಿಷ್ಯದ ಬಗ್ಗೆ

ಚರ್ಚಿಸುತ್ತಾರೆ.

 

ಮತಗಳ ಕೊಂಡುಕೊಂಡು

ಆಡಳಿತದ ಚುಕ್ಕಾಣಿ ಹಿಡಿದ

ರಾಜಕಾರಣಿಗಳು

ಲಕ್ಷಕ್ಕೆ ಕೋಟಿ ದುಡಿಯುತ್ತಾರೆ.

ದೇಶಪ್ರೇಮಿಗಳಾಗಿರೆಂದು

ಸಾಮಾನ್ಯರಿಗೆ

ಕರೆ ಕೊಡುತ್ತಾರೆ.

 

ಜನಸಾಮಾನ್ಯರು

ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ

ಹೆಂಡ ಕುಡಿದು ಮತ ಹಾಕುತ್ತಾರೆ

ಹಣವಂತರನ್ನು ಮಾನ್ಯ ಮಾಡುತ್ತಾರೆ.

ತಮ್ಮನ್ನು ಉದ್ಧಾರ ಮಾಡಲು

ಪವಾಡ ಪುರುಷನೊಬ್ಬ ಬರಲೆಂದು

ಹಂಬಲಿಸುತ್ತಾರೆ.

 

ವಿಷ ಚಕ್ರವೊಂದು ಉರುಳುತ್ತಿದೆ.

ಕ್ರಾಂತಿಯೆಡೆಗೋ

ದಾಸ್ಯದೆಡೆಗೋ

ತಿಳಿಯದಾಗಿದೆ.

ಭ್ರಷ್ಟತೆಯ ನಂಜು ಏರಿ

ನೆಮ್ಮದಿಯ ಬದುಕು

ಬಸವಳಿದು ಹೋಗಿದೆ.