ಸಿನಿಮಾ ಸಮಾಜದ ಕನ್ನಡಿ ಎನ್ನಬಹುದಾದರೆ, ಸಿನಿಮಾದಲ್ಲಿ ತೋರಿಸುತ್ತಿರುವುದು ಬಹುತೇಕ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ.. ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವಕ್ಕಾಗಿ ಸ್ಪರ್ಧೆ. ಇಂಥದ್ದೊಂದು ಪರಿಸ್ಥಿತಿ ಇರುವುದರಿಂದಲೇ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತವೆ. ಇವುಗಳನ್ನು ಆಧರಿಸಿ ಸಾರ್ವಜನಿಕ ಸೇವೆಯಲ್ಲೂ ಬಹಳಷ್ಟು ಬದಲಾವಣೆ, ಹೊಸತನ ಕಾಣುತ್ತೇವೆ. ಸದ್ಯಕ್ಕೆ ವೈದ್ಯಕೀಯ ರಂಗಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಸಿನಿಮಾ ಕತೆಯೊಂದರ ಉದಾಹರಣೆಯೊಂದಿಗೆ ಆರಂಭಿಸಬಹುದು.
ಮುನ್ನಾಬಾಯಿ ಎಂಬಿಬಿಎಸ್. ಈ ಹಿಂದಿ ಚಿತ್ರದ ಕನ್ನಡ, ತೆಲುಗು, ತಮಿಳು ಆವೃತ್ತಿ ಕೂಡಾ ಬಂದಾಗಿದೆ. ತಿರುಗಿ ನೋಡದಂತೆ ಹೋಗಿಯೂ ಆಗಿದೆ. ಆದರೆ ವಿಚಾರ ಅದಲ್ಲ. ಸಾಮಾನ್ಯವಾಗಿ ಆಸ್ಪತ್ರೆ, ವೈದ್ಯರು ಅಂದರೆ ಜನ ಮಾರು ದೂರ ಹೋಗುತ್ತಾರೆ. ಅನಿವಾರ್ಯ ಪರಿಸ್ಥಿತಿ ಎದುರಾದಾಗ ಮಾತ್ರ ತುಂಬ ಸಂಕಟದೊಂದಿಗೆ ಆಸ್ಪತ್ರೆ ಮುಖ ನೋಡುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಆಸ್ಪತ್ರೆಯಲ್ಲಿ ಎದುರಾಗುವ ಪರಿಸ್ಥಿತಿ ಬಹುತೇಕ ಸಂದರ್ಭದಲ್ಲಿ ಹಾಗೇ ಇರುತ್ತದೆ.
ಮುನ್ನಬಾಯಿ ಸಿನಿಮಾದಲ್ಲಿ ಎಲ್ಲರಿಗೂ ಕತೆ ಗೊತ್ತಿರುವ ಹಾಗೆ ದಾದಾ ಒಬ್ಬ ಹುಡುಗಿಯೊಬ್ಬಳ ಪ್ರೀತಿಗೋಸ್ಕರ ತನ್ನ ಪ್ರೀತಿಯನ್ನು ಧಾರೆ ಎರೆಯುವ ಪರಿ... ಸ್ವಲ್ಪ ರೌಡಿಸಂ.. ಸ್ವಲ್ಪ ಕಾಮಿಡಿ.. ಬಹಳಷ್ಟು ಪ್ರೀತಿಯ ಎರಕದೊಂದಿಗೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರುವುದು. ಬಳಿಕ ಆಸ್ಪತ್ರೆಯ ವಾತಾವರಣದಲ್ಲಿ ತರುವ ಬದಲಾವಣೆ ನಿಜಕ್ಕೂ ಮನಮುಟ್ಟುವಂಥಾದ್ದು. ಕಸ ಗುಡಿಸುವ ತಾತನನ್ನು ಪ್ರೀತಿಯಿಂದ ಆದರಿಸುವ ಆ ಕ್ಷಣ.. ಸಾಯೋಕೆ ಪ್ರಯತ್ನಿಸಿದ ಯುವಕನ ಮನವೊಲಿಸುವ ಆ ಪ್ರಯತ್ನ.. ಸಾವಿನ ಸನಿಹದಲ್ಲೇ ಇರುವ ವ್ಯಕ್ತಿಗೆ ಕೊನೆಯ ಆಸೆ ಪೂರೈಸುವ ಛಲ.. ಒಂದು ರೀತಿಯಲ್ಲಿ ಮನೆಯ ವಾತಾವರಣ ಆಸ್ಪತ್ರೆಯಲ್ಲಿ ಕಾಣುವಂತೆ ಮಾಡಿತ್ತು. ಇವೆಲ್ಲವೂ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸುವುದಲ್ಲದೇ, ಬಹುಬೇಗ ಚೇತರಿಕೆಯನ್ನೂ ಕಾಣುವಂತೆ ಮಾಡತ್ತೆ.
ರಮೇಶ್ ಅರವಿಂದ್ ಅವರಿಗೆ ಆತ್ಮೀಯ ಸ್ವಾಗತ..
ಇದು ಸಿನಿಮಾ ಕತೆಯಾದರೆ, ನಿಜ ಜೀವನದಲ್ಲೂ ಇಂತಹ ಪ್ರಯತ್ನ ನಡೆಯಬೇಕಿದೆ. ಅದನ್ನು ಸಾಕಾರಗೊಳಿಸಬೇಕಿದೆ ಎಂದು ಬಯಸಿದವರು ಅನೇಕ. ಆದರೆ ಕಾರ್ಯದಲ್ಲಿ ಅನುಷ್ಠಾನಗೊಂಡಿರುವುದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಯಲ್ಲಿ ಮಾತ್ರ.
ಅಂತಹ ವಿಶೇಷತೆ ಇಲ್ಲೇನಿದೆ ಎಂದು ಹುಬ್ಬೇರಿಸಬಹುದು. ಕೇರಿಂಗ್ ಸೆಲೆಬ್ರಿಟಿ-ಎ ಆರ್ಟಿಸ್ಟ್ ವಿತ್ ಎ ಹಾರ್ಟ್ ಅನ್ನೋ ವಿಶೇಷ ಕಾರ್ಯಕ್ರಮ ಸದ್ದಿಲ್ಲದೇ ಆರಂಭಗೊಂಡಿದೆ. ಬಹುತೇಕ ಸಿನಿಮಾದಲ್ಲಿ ರೋಲ್ ಮಾಡೆಲ್ ಆಗಿ ಕಾಣಿಸುವ ಸೆಲೆಬ್ರಿಟಿಗಳು, ತಮ್ಮ ಬಿಡುವಿಲ್ಲದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ವಿಕ್ರಂ ಆಸ್ಪತ್ರೆಗೆ ಭೇಟಿ ಕೊಡಲಾರಂಭಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಟ ರಮೇಶ್ ಅರವಿಂದ್. ಜೆನ್ನಿಫರ್ ಜೊತೆ ಡಾ ಸತ್ಯ... ಹಾಡಿಗೆ ಹೆಜ್ಜೆ ಹಾಕಿದ ರಮೇಶ್ ವಿಕ್ರಂ ಆಸ್ಪತ್ರೆಗೆ ಆಗಮಿಸಿ, ಎರಡು ಗಂಟೆ ಕಾಲ ರೋಗಿಗಳ ಜೊತೆ ಕಷ್ಟ ಸುಖ ಹಂಚಿಕೊಂಡರು. ಗೆಟ್ ವೆಲ್ ಸೂನ್ ಶುಭಹಾರೈಕೆ ಪತ್ರ ನೀಡಿದರು. ವಿಕ್ರಂ ಮಲ್ಟಿ ಸ್ಪೆಷಾಲಿಟಿ ಟೆರ್ಷರಿ ಕೇರ್ ಆಸ್ಪತ್ರೆಯ ಕಾರ್ಯವೈಖರಿ ಮತ್ತು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆ ಕ್ಷಣ..
ಈಗಿನ ಅವಶ್ಯಕತೆಗೆ ತಕ್ಕಂತೆ ಆಸ್ಪತ್ರೆಯ ವಾತಾವರಣ ಬದಲಾದರೆ ಉತ್ತಮ. ವೈದ್ಯರು ಮತ್ತು ಸಿಬ್ಬಂದಿಗಳು ಮನೆಯವರಂತೆ ಇದ್ದರೆ ಇನ್ನೂ ಒಳ್ಳೆಯದು. ಕಲಾವಿದರು ಬಿಡುವು ಮಾಡಿಕೊಂಡು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ, ನೋವಿನಲ್ಲಿರುವವರಿಗೆ ಸಾಂತ್ವನ ಹೇಳಿಕೊಂಡಂತಾಗುತ್ತದೆ. ಇದು ಅನೇಕ ಸಂದರ್ಭದಲ್ಲಿ ರೋಗಿಗಳಲ್ಲಿ ಶೀಘ್ರ ಚೇತರಿಕೆಗೂ ಕಾರಣವಾಗುತ್ತದೆ ಅನ್ನೋದು ಸ್ವತಃ ರಮೇಶ್ ಅರವಿಂದ್ ಅಭಿಪ್ರಾಯ. ವಿಕ್ರಂ ಆಸ್ಪತ್ರೆಯ ಐಸಿಯು ವಿಭಾಗವಂತೂ ಗಮನಾರ್ಹ. ಯಾವ ಆಸ್ಪತ್ರೆಯಲ್ಲೂ ಈ ರೀತಿ ಐಸಿಯು ವಿನ್ಯಾಸಗೊಳಿಸಿಲ್ಲ. ರೋಗಿಗಳ ಸಂಬಂಧಿಕರೂ ಐಸಿಯುನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಬಹುದು. ಇದು ನಿಜಕ್ಕೂ ಪ್ಲಸ್ ಪಾಯಿಂಟ್ ಅನ್ನೋದು ರಮೇಶ್ ಹೇಳಿಕೆ.
ವಾರ್ಡ್ನಲ್ಲಿ ತಮ್ಮ ನೆಚ್ಚಿನ ನಟ ರಮೇಶ್ ಅವರನ್ನು ನೋಡಿದ್ದೇ ತಡ ಎಲ್ಲರೂ ಮೂಕವಿಸ್ಮಿತರಾದರು. ಕೆಲವರಂತೂ ರಮೇಶ್ ಅವರ ಹಳೆಯ ಮತ್ತು ಹೊಸ ಸಿನಿಮಾಗಳ ಮೆಲುಕು ಹಾಕಿದ್ರು. ಒಟ್ಟಿನಲ್ಲಿ ವೈದ್ಯಕೀಯ ರಂಗದಲ್ಲೂ ಬಹಳಷ್ಟು ಬದಲಾವಣೆಗೆ ಇಂತಹ ಕಾರ್ಯಕ್ರಮಗಳು ಮುನ್ನುಡಿ ಬರೆಯ ತೊಡಗಿವೆ ಅನ್ನೋದಕ್ಕೆ ಅಡ್ಡಿಯಿಲ್ಲ.
ಬದಲಾವಣೆಯ ಹಾದಿಯಲ್ಲಿ ವೈದ್ಯಕೀಯ ರಂಗ..
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!