ಪರಮನ ಪಾದುಕೆ

 

ರಾಘವನ ಸಿರಿಯಡಿಯಿಂದ

ರಾಘವನ ಸಿರಿಮುಡಿಗೇರಿ

ರಘುಕುಲದ ಸಿಂಗಾಸನದಿ

ಮೆರೆದ ಆ ಪಾದುಕೆಗೆ

ಸಿರಬಾಗಿ ಕಿವಿಗೊಟ್ಟೆ!

 

ದಾಶರಥಿಯ ದಯೆಯ

ಪ್ರತಿಬಿಂಬವೇ ನಮ್ಮೊಡನೆ

ನೀ ಪಡೆದ ಭಾಗ್ಯವ

ಬಣ್ಣಿಸಿ ನುಡಿಯಬೇಕು

ಕೈ ಮುಗಿದು ಬೇಡುವೆವು

 

ಘಲಘಲನೆ ಇಂಚರಿಸಿ

ಪಾದುಕೆ ನೆನಪಿನಂಗಳಕೆ

ಇಳಿದು ಉಲಿಯಿತಿಂತು

"ಮೆಲ್ಲ ಮೆಲ್ಲನೆ ಬನ್ನಿ

ಇದು ರಾಜಭವನ!"

 

ಕಾಣಿರಿಲ್ಲಿ ಕೈಕೇಯಿಯ

ಅಟ್ಟಹಾಸಕೆ ನಡುಗಿ

ಉಡುಗಿ ನಿಂದ ದಶರಥನ!

ಕಡು ಶಾಂತತೆಯ ಕದಲಲ್ಲಿ

ಮಿಂದೆದ್ದ ದಾಶರಥಿಯ!

 

ಅಲ್ಲಿ ಕಾಣಿರಿ ಸೀತೆಯನು

ಅವನಿಜಾತೆಯವಳು

ಜನಕನ ಸಿರಿ ಸಹನೆಯ ಖನಿ

ಕುಸುಮ ಕೋಮಲ ಕೈಯಲ್ಲಿ

ಮೃದು ಕುಸುಮ ಮಾಲೆ!

 

ಕೌಶಿಕನೊಡನೆ ಬಂದ

ಸುಕುಮಾರನ ಕೊರಳಿಗೆ

ಮಾಲೆ ತೊಡಿಸಿದಳಂದು

ಕನಸಿನ ತಾರಗೆಗಳ ನೈದು

ಸಹ ಬಾಳ ಸವಿಯಲೆಂದು

 

ಅಹೋರಾತ್ರಿ ಯ ಪೂಜೆ

ತನ್ನವನ ಒಳಿತಿಗಾಗಿ

ಈಗಷ್ಟೆ ತಿಳಿದಿಹಳು

ದಾಶರತ್ ಹಿಯ ವನಗಮನ

ಅಳುಕಲಿಲ್ಲ ಕಾನನದ ವಾಸಕ್ಕೆ

 

ಒಲಿದವನ ಒಳಿತಿಗಾಗಿ

ಕಾಂತರದಲು ಒಡನಾಡಿ

ಮೃದುಪಾದಗಳಿಗೆ

ಕಲ್ಲುಮುಳ್ಳಿನ ಪಾವುಗೆ

ಮಾಸಲಿಲ್ಲ ಮೊಗದ ಮೃದು ನಗೆ!

 

ನಿನಗಾಗಿ ತಿರೆಗೆ ಬಂದೆ

ನಿನ್ನ ನೆರಳಾಗಿ ಬಾಳ್ವೆ

ನಾ ನಿನ್ನ ಬೆನ್ನ ಬಿಡನೆಂದು

ಓಡುತ್ತ ಬಂದ ಅನುಜ

ಸೆವೆಯ್ ಸವಿಯೆ ಸರ್ವಸ್ವವೆಂದ

 

ಮುಗಿಲು ನೆಲಗಳ ನದುವೆ

ಹರಿವ ನದಿಗಳ ಅಲೆಗಳಲಿ

ಆತ್ಮ ನಿವೇದನೆಯ ಆನಂದ ಲಹರಿ ಸ್ಥಂಬಿಸಿದೆ

ಕಾಣ ಬನ್ನಿರಿ ನೀವು !

 

ಕೇಳಿ! ಕೇಳಿ! ಕೋಲಾಹಲದ ದನಿ

ಅಲೆ ಅಲೆಯಾಗಿ ಬರುತಿದೆ

ಕೋಸಲವೇ ಬಂದು ಬಿಟ್ಟಿದೆ

ರಾಘವನ ಮರಳಿಸಲು

ಮರಳುವನೆ ರಾಘವ?

 

"ಬಾ ಅಣ್ಣಾ, ಅಣ್ಣಾ ಬಾರ

ವೃಷಭ ಹೊರುವ ಹೊರೆಯ

ಕರು ಹೊರಲಾರದು ಕಾಣ"

ಎಂದು ಬೇಡುತಿಹ ಕೈಕಯಿ ಸುತ

ಕಂಬನಿಯ ಕಡಲನ್ನೇ ಹರಿಸಿ

 

ಎಲ್ಲ ಎಲ್ಲವ ಬಲ್ಲ

ಬಲ್ಲಿದನು ನುಡಿದ

"ಬರುವೆ ಬಂದೇ ಬರುವೆ

ತಿರೆಯ ಬಾರವ ನಿಳಿಹಿ

ನಿನ್ನ ತೆಕ್ಕೆಗೆ ಬರುವೆ"

 

ತನ್ನದಾದ ಸಿರಿಯ ಬಿಟ್ಟವನ

ತನ್ನದಲ್ಲದ ಸಿರಿಯ ಒಲ್ಲದವನ

ಸೇವೆಯೊಂದನೇ ತನಗಿರಲ್ಲೆಂದವನ

ನಲ್ಲನಲ್ಲದೇ ಬೇರಿಲ್ಲ ಎಂದವಳ

ಏನೆಂದು ಬಣ್ಣಿಸಲಿ ನಾನು?!

 

ಸವಿದಿರ ಬೇಕು ನೀವು

ತ್ಯಾಗ ಸಂಗಮವ

ನನ್ನೊಡನೆ ಕಾಯ ಬನ್ನಿ

ಪರಮನ ಬರವಿಗಾಗಿ

ರಾಮ ರಾಜ್ಯದ ಸ್ಥಿರತೆಗಾಗಿ