ಮೊರೆ

 

ಅಕ್ಕಿಯುಂಟು ನೀರುಂಟು

ಬಿರುಸಾಗದಂತೆ

ಮಿಡ್ಡೆಯಾಗದಂತೆ

ಮೃದು ಅನ್ನವಾಗಿಸು.

ಕುದಿಯಲೆಂದು

ಒಲೆಯ ಮೇಲಿಟ್ಟ ಸಾರು.

ತಳ ಹತ್ತಿ ರುಚಿ ಕೆಡದಂತೆ

ನೀನೆ ನೋಡಿಕೊ.

ಬಾಣಲೆಯೊಳಗಿನ ಕಾಳು.

ಗರಿ ಗರಿಯಾಗುವಂತೆ ಹುರಿ

ಬೆಂಕಿಗೆ ಬೀಳದಂತೆ

ಕಾಪಾಡು.

ಮಿಕ್ಸಿಯೊಳಗಿನ ಕಾಯಿತುರಿ.

ಮಸಾಲೆಗಳನೆಲ್ಲ

ಹದವಾಗಿ ಬೆರಸು

ರುಚಿಯಾದ

ಮೇಲೋಗರವಾಗಿಸು.

ಉಳಿದ ಹಾಲು.

ಒಡೆಯುವ ಮುನ್ನ

ಹೆಪ್ಪಿಗೆ

ಹಾಕಿಬಿಡು.

ಅಡುಗೆ

ಹಳಸುವ ಮುನ್ನ,

ಮೊಸರು

ಹುಳಿಯಾಗುವ ಮುನ್ನ

ಉಂಡು ಬಿಡು, ಉಂಡು ಬಿಡು.