ಚಿನ್ನವೆಂದರೆ ಹುಡುಗನಿಗೆ ಇತ್ತು ತಿರಸ್ಕಾರ

ಧರಿಸಿದವರಿಂದ ಇರುತ್ತಿದ್ದ ಮಾರುದೂರ

ಮದುವೆಯಲ್ಲೂ ಬೇಡವೆಂದ ಬೆಳ್ಳಿ ಬಂಗಾರ

ಅರಿತವಳಾದರೆ ಸಾಕೆಂದ, ಮಾತು ಬೆಳ್ಳಿ ಮೌನ ಬಂಗಾರ.

 

ಮದುವೆಯಾಯಿತು ಸತಿಗೋ ಚಿನ್ನದ ಆಸೆ ಅಪಾರ

ಉಳಿಸಿದಳು ಅದಕೆಂದೆ ಹಣ, ವರ್ಷ ಪೂರ

ಕೇಳಿದಳು ಪತಿಯ ಚಿನ್ನದಂಗಡಿಗೆ ಹೋಗೋಣ ಬಾರ

ನಿಧಾನಿಸಿದರೆ ಹೆಚ್ಚಾದೀತು ಚಿನ್ನದ ದರ.

 

 

ಪತಿಯೆಂದ ಚಿನ್ನವೊಂದು ಹಳದಿ ಲೋಹ

ಬಿಡಲಾರೆಯೇಕೆ ನೀನದರ ವ್ಯಾಮೋಹ

ಆಭರಣವಿಲ್ಲದೆ ಕಾಣುವೆ ನೀ ಬಲು ಅಂದ

ಚಿನ್ನ, ಒದವೆ ಮಾತ್ರವಲ್ಲ ಜಗದಿ, ಕೊರಗದಿರು ಎಂದ.

 

ಉಲಿದಳು ಸತಿ ಸ್ವಲ್ಪವಾದ್ರು ಇರಬೇಕು ಬಂಗಾರ

ಇಲ್ಲದಿದ್ದರೆ ಆಗುವೆವು ಸಸಾರ

ಅನು ಆಪತ್ತಿಗಾಗುವುದು ಇದ್ದರೆ ಬಂಗಾರ

ಇಟ್ಟರೆ ಹಣ ಬ್ಯಾಂಕಲ್ಲಿ, ಸಿಗಲ್ಲರಿ ಹೆಚ್ಚು ಬಡ್ಡಿ ದರ.

 

ಪತಿಯೆಂದ ಧರಿಸಿದರೆ ನೀ ಒಡವೆ ಬಂಗಾರ

ನೋಯುವುದಿಲ್ಲವೆ ಮನ ಒಡವೆ ಇಲ್ಲದವರ

ಮಾರಲು ಹೋದರೆ ಸಿಗುವುದು ಹಣ ಕಡಿಮೆ

ಕಳ್ಳರು ಕದ್ದರೆ ಕಳೆವುದು ಕಷ್ಟದ ದುಡಿಮೆ.

 

 

ಕೋಪಗೊಂಡ ಸತಿ ಬಿಟ್ಟಳು ಮಾತು, ಇಡೀ ವಾರ

ಬಗ್ಗಲಿಲ್ಲ ಪತಿ, ಮುಂದುವರೆಯಿತು ಶೀತಲ ಸಮರ

ಅತ್ತು ಸೊರಗಿ ಸತಿಯಾದಳು ಸಪೂರ

ಕರಗಲಿಲ್ಲ ಮನ ಪತಿ ಮಹಾಶಯರ.

 

ಸೋತೆಂದಳು ಸತಿ ನೋಡಿ ಕಲಿಯಬಾರದೆ ಬೇರೆ ಗಂಡಸರ

ಓಲೈಸುವರೆಷ್ಟು ಚೆನ್ನಾಗಿ ಉಡುಗೊರೆಯಿತ್ತು ಬಂಗಾರ

ಪತಿಯೆಂದ ಆಗಲೇಬೇಕೇನು ನಾ ಅವರ ತರ

ಇರುವೆನು ಹೊರಗೆ ಪಾನೀಯ, ಇಸ್ಪೀಟೆಂದು ರಾತ್ರಿ ಪೂರ.

 

ಅರಿವಾಯಿತು ಸತಿಗೆ ತನ್ನ ತಪ್ಪು ಏನೆಂದು

ಕೇಳಿದಳು ಪತಿಯ, ತನ್ನ ಆಸೆ ತಪ್ಪೇ ಎಂದು

ರಮಿಸುತೆಂದ ಪತಿ ನಿನ್ನಾಸೆ ಸರಿ, ನಾನೇಕೆ ಅಡ್ಡ ಬರಲಿ

ಮಾಡಿಸಿಕೊ ಬೆಲೆ ಇಳಿದಾಗ, ಆದರೆ ಮಿತಿ ಇರಲಿ.