ಒಂದೊಮ್ಮೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು

ಇಂದಾಗಿದೆ ಕಾಂಕ್ರೀಟಿನ ನಗರಿ ಬೆಂಗಳೂರು

ಎತ್ತ ನೋಡಿದರು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು

ಇಂದಾಗಿದೆ ಬೃಹತ್ ಕಟ್ಟಡಗಳ ತವರೂರು..

 

ಜನಗಳೇ ಇಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು

ಇಂದು ತುಂಬಿಕೊಂಡಿವೆ ಬರೀ "ಕಾರು" "ಬಾರು"ಗಳು

ವಾಹನಗಳಿಗೆ ಮಾಡುತ್ತಿದ್ದಾರೆ ರಸ್ತೆ ಅಗಲೀಕರಣ

ಪಾದಚಾರಿ ಮಾರ್ಗಗಳಾಗುತ್ತಿವೆ ಇರುವೆ ಮಾರ್ಗಗಳು..

 

ಎಗ್ಗಿಲ್ಲದ್ದೆ ನಡೆಯುತ್ತಿದೆ ಮರಗಳ ಮಾರಣಹೋಮ

ನಿತ್ಯ ಹೆಚ್ಚುತ್ತಿದೆ ವಾಹನಗಳ ಕಪ್ಪು ಧೂಮ

ಆದರೂ ವಲಸೆ ಬರುತ್ತಿರುವರು ಪರಭಾಷಿಕರು

ಬಂದು ಇಲ್ಲಿಯೇ ನೆಲೆ ಕಂಡುಕೊಳ್ಳುತಿರುವರು

 

ಎತ್ತ ನೋಡಿದರೂ ಮೇಲ್ಸೇತುವೆಗಳು, ಸುರಂಗ ಮಾರ್ಗಗಳು

ಅಣಬೆಯಂತೆ ತಲೆ ಎತ್ತುತಿರುವ ಮಾಲುಗಳು, ಬಹುಮಹಡಿ ಕಟ್ಟಡಗಳು,

ಮಳೆ ಬಂದರೆ ಕೆರೆ ಸಾಗರಗಳಾಗುವುದು ರಸ್ತೆಗಳು

ತೆರೆದ ಚರಂಡಿಗಳಾಗುವುದು ಮೃತ್ಯುಕೂಪಗಳು..

 

ಯಾವುದೇ ಸಂಘಗಳು ಇಲ್ಲದಾಗ್ಯೂ ಎಲ್ಲೆಡೆ ಇತ್ತು ಕನ್ನಡ

ಗಲ್ಲಿಗೊಂದು ಸಂಘವಿದ್ದರೂ ಹುಡುಕಬೇಕಿಂದು ಕನ್ನಡ

ಹೀಗೆಯೇ ಸಾಗಿದರೆ ಎತ್ತ ಸಾಗುವುದು ನಮ್ಮೂರು

ಮತ್ತೆಂದೂ ಆಗದು ಉದ್ಯಾನ ನಗರಿ ಈ ಬೆಂಗಳೂರು..