ದೂರದಿ ಗಗನದಿ ಏರುತ ನಡೆವುದು
ಎನ್ನಯ ಆಸೆಯ ಗೋಪುರವು
ಕತ್ತಲೆ ಕವಿದಿರೆ ಬೆಳಕನು ನೀಡಿ
ಮನವನು ಮುಂದಕೆ ನಡೆಸುವುದು

ನಿರಾಸೆ ನಿಳೆಯು ತಾ ಕವಿದಾಗ
ಆಸೆಯ ರವಿಯು ಹೊಳೆಯುವನು
ಕಷ್ಟದ ಕಠಿಣತೆ ತಾ ಕೊರೆದಾಗ
ಆಸೆಯ ಮೊರುತಿ ಮೊಡುವುದು

ಎನ್ನಯ ಆಸೆಯು ಫಲಿಸದೆ ಇರಲು
ಜಗವೇ ಜಂಜಡ ವೆನಿಸುವುದು
ಮತ್ತೆದೇ ನಿಮಿಷಕೆ ಯೋಚನೆಯೊಂದು
ಫಲವನು ಮುಂದೆಯೇ ಹಿಡಿದಿಹುದು

ಕಷ್ಟಗಳೆಲ್ಲವೂ ಎನ್ನನು ಮುತ್ತಲು
ಕಣ್ಣಲಿ ಕೋಡಿಯೇ ಒಡೆಯುವುದು
ಆಸೆಯ ಗಾಳಿಗೆ ಕಷ್ಟಗಳಳಿಯಲು
ಮನದಲಿ ಶಾಂತಿಯು ನೆಲೆಸುವುದು

ಬಾಳಲಿ ತೊಂದರೆ ಬರಲೇ ಬೇಕು
ಮುಂದೆಯೇ ಸುಖವು ರುಚಿಸುವುದು
ಆಸೆ-ನಿರಾಸೆ ಗಡಿ-ಬಿಡಿಯಲ್ಲಿ
ಬಾಳಿದು ಬೆಳ್ಳನೆ ಬೆಳಗುವುದು