ಆತ್ಮದ ಹಾದರಕ್ಕೆ, ಹಾಹಾಕಾರಕ್ಕೆ

ಚೀತ್ಕಾರಕ್ಕೆ, ಪಾಪದ ಪದಗಳೆ ಸಾಕ್ಷಿ

ಶಬ್ದದಗಳ ನಿಶ್ಯಬ್ಧ ಮೆರವಣಿಗೆಯಲ್ಲಿ

ಸೊಲ್ಲಿಲ್ಲದವರ ರೌದ್ರನರ್ತನ

 

ಬದುಕಿನುದ್ದಕ್ಕೂ ಬವಣೆಗಳ

ಬಿಸಿ ಅಪ್ಪುಗೆಯ ಕಾವಿಗೆ ಗುಟ್ಟಿನ ಗಟ್ಟಿ

ಮೊಟ್ಟೆಗಳೂಡೆದು ಮತ್ತೆ ಮರಿಯಾಗಿ

ಮೊಟ್ಟೆಗಳನಿಡುವ ಐನಾತಿ 

 

ನೊ೦ದವರ ನೋವಿನ ಜಾನಪದದೊಡತಿ ಈ ಗೆಳತಿ

ಮಾತಿಗೆ ಸಿಗದ, ಮೌನಕ್ಕೆ ಬಗ್ಗದ ಮಾಯೆ

ಒಗಟುಗಳ ಬಿಡಿಸಿದರೆ ಹುಣ್ಣಿಮೆಯ ಚ೦ದಿರ

ಸತ್ತವರ ಸ್ವತ್ತಿಗಾಗಿ ನೆತ್ತರ ಬೇಡುವ ನರ ಹ೦ತಕಿ

 

ಒಮ್ಮೊಮ್ಮೆ ನಿದ್ರಾದೇವಿ, ಮಗದೊಮ್ಮೆ

ನಿದ್ದೆಯ ಕದ್ದೊಯ್ವ ಕರುಣಾಹೀನೆ

ಕೆಲವೊಮ್ಮೆ ವ೦ಚಕರ

ಹೆಸರನೇಳದೆ ಕೊಲ್ವ ಚೂಪುಗತ್ತಿ

 

ಪದಗಳಿಂದುಟ್ಟಿ ಪದಕೆ 

ನಿಲುಕದ ಜೀವವಿಲ್ಲದ ಜೀವಿ

ವೈರಾಣು ಎ೦ದರು ಸರಿಯೇ

ಕೊರಡು ಕೊನರಲು ಜೀವ ಸ೦ಜೀವಿನಿ

 

ಗಡಿಗಳನಳಿದು, ಗುಡಿ ಚರ್ಚು ಮಸೀದಿಗಳ ದಾಟಿ

ಭಾಷೆಗಳ ಬೇಲಿಯ ಹಾರಿ

ಮೈ ಬಣ್ಣಗಳ ಮೀರಿ,ಲಿ೦ಗಬೇಧಗಳನಳಿದು

ಅರಿಷಡ್ವರ್ಗಗಳ ತೊರೆದು ಮಿ೦ಚುವ ಮಿ೦ಚು

 

ಕವಿಗೆ ಆತ್ಮದರತಿ, ಗೆಳತಿ

ಕವಯತ್ರಿಗೆ ರಹಸ್ಯದ ಗೆಳಯ

ಆಗಾಗ ಕೆಲವರಿಗೊಲೆಯದೆ 

ಷಿಕ೦ಡಿ, ಛ೦ಡಿ, ಮ೦ಡ ಮ೦ಡಿ