******** ಮುಂಗಾರು ಮಳೆ *********

ವ್ಯೋಮ ನೇಪಥ್ಯದಲಿ ಮೇಘನಾದವ ಮೊಳಗಿಸಿ
ರುಂದ್ರ ಕಾರ್ಮೋಡದಲಿ ರುದ್ರ ಸಿಡಿಲ ನರ್ತಿಸಿ
ನಭಸಾಂಮ್ರಾಜ್ಯದೊಳು ಮಿಂಚಿನರಮನೆಯ ನಿರ್ಮಿಸಿ
ವಾಯುರಥವನೇರಿ ಬರುತಿದೆ ಮುಂಗಾರು ಮಳೆ
ಹರುಷದಲಿ ಮಿಂದಿಹುದು ಮೃಣಯ ಇಳೆ

ತಂಪನಿಗಳ ತಬ್ಬಿ ತರುಲತೆಗಳು ಕುಣಿದು,
ಒಣನೆಲೆದ ಬಿರುಕ ಮುಚ್ಚಿ, ನದಿಕೆರೆಗಳು ತಣಿದು,
ಸಿಹಿ ಹನಿಗಳನು, ಜೀವ ಸಂಕುಲವು ಸವಿದು,
ಅನುಭವಿಸಿದೆ ಜಗ ರೋಮಾಂಚನ ಹನಿ ಹನಿಯಲು ತೊಯ್ದು.
ಮುಡಿಗೇರಿಸಿಹಳು ಭೂತಾಯಿ ಮಳೆಹೂಗಳ ಆಯ್ದು.

ಹಾರಾಡುವ ಹಕ್ಕಿರೆಕ್ಕೆಯಲಿ ಜಾರುತ,
ಜಿಗಿಜಿಗಿಯುವ ಜಿಂಕೆ ಕೊಂಬೊಳು ಚಿಮ್ಮುತ,
ವನಸುಮದಳದಂಚಿನಲಿ ತೂಗಾಡುತ,
ನೋಡೆಲ್ಲೆಡೆ ಸುರಿಯುತಿದೆ ಮುಂಗಾರುಮಳೆ.
ತೊಡಿಸಿಹೆ ಧರಿತ್ರಿಗೆ ಜಲಶೃಂಗಾರ ಬಳೆ.

ದುಡಿವ ರೈತನ ಬೆವರನಿ ಜೊತೆ ಜಾರಿ,
ನಿದ್ರಿಪ ಕೊಳದಲಿ ಅಲೆರಾಶಿಗಳ ಕಾರಿ,
ನೆಲ,ಜಲ,ಭೂಚರರಲ್ಲಿ ಸಮಾನತೆ ತೋರಿ,
ಬಿರುಸಿನಿಂದೆರಗಿದೆ ಮುಂಗಾರು ಮಳೆ,
ನೋಡಲ್ಲಿ  ಇಳೆಯಲಿ ನಗುವಿನ ಕಳೆ.

ಬಿಸಿಲ ಬೇಗೆಯನು ತವಿಸಿ ಕಾಣದಾಗಿಸಿ,
ಹರಿವ ಮಳೆನೀರ ಮೃದುತಲ್ಪವಾಸಿ,
ಭೂಮ್ಯಾಕಾಶ ಸಾಪೇಕ್ಷ ಸದೃಶ್ಯಗೊಳಿಸಿ,
ಹನಿಮಣಿಗಳ ಸುರಿಸುತಿದೆ ಮುಂಗಾರುಮಳೆ.
ಬೀಳುತ ಮಲೆ,ಬನ,ಬಯಲಿನಲಿ,
ಬರೆಯುತ ಮಳೆಬಿಲ್ಲ ಬಾನಿನಲಿ,
ಬಿಡಿಸುತ ವರ್ಣಚಿತ್ರ ಹನಿಕುಂಚದಲಿ,
ತಣ್ಚೊಡರನುರಿಸುತ ಮನದೇಗುಲದಲಿ,
ಮುಂಗಾರು ತೊಯ್ದಿದೆ ಕಬ್ಬಿಗನ ಸ್ಫೂರ್ತಿಯಲಿ,
ಕಲ್ಪನೆಯು ಚಿಮ್ಮರಿಸಿದವನಲಿ ಕಾವ್ಯದ ಹೊಳೆ!!

- ಚಂದ್ರಹಾಸ ( ಜೂನ್ ೧೯ ೨೦೧೦)