ಬೇಡಮ್ಮ  ನನಗೂ ತೊಡಿಸಬೇಡ

ನೀನು, ಅಜ್ಜಿ , ಮುತ್ತಜ್ಜಿ  ಎಲ್ಲರೂ ನೋವುಂಡು ತೊಟ್ಟ
ಸವೆದುಹೋದ  ಅದೇ ಮೂಗುತಿಯನ್ನು  ಉಡುಗೊರೆಯಾಗಿ...
 
ಹೊಳಪು, ಹರಳುಗಳೇನೂ  ಉಳಿದಿರದಿದ್ದರೂ, 
ಭಾರ  ಅದು ನನ್ನಿಂದಾಗದು   
ನಿನಗೆ  ತಿಳಿದಿದ್ದರೂ ಎಲ್ಲ ಯಾಕೀ ಬಲವಂತ
ನಿನ್ನಲ್ಲೇಯಿರಲಿ ಭದ್ರವಾಗಿ , ನಿನ್ನಮ್ಮ ಕೊಟ್ಟ ಬಂಗಾರದ ಮೂಗುತಿ 
 
ನಿನ್ನುಡುಗೊರೆ ತೊಟ್ಟು ನಾ ಬದುಕಲಾರೆ ನನ್ನಂತೆ
ಇರಬಹುದು, ಬದುಕಬಹುದು ನಿನ್ನಂತೆ, ಸತಿ- ಸಾವಿತ್ರಿಯಂತೆ
ಸಾದ್ಯವಿಲ್ಲ ನನಗದು, ಹೊರಿಸಬೇಡಮ್ಮ  ಹೊರಲಾರದ ಹೊರೆ
ನಿನ್ನಮ್ಮನಂತೆ ನೀನೂ ಹೆದರಿ....
 
ತೊಡುವಾಗಲೂ, ತೊಟ್ಟ ನಂತರವೂ ನೋವು 
ಇನ್ನು ಕಳಚಿಡುವ ಮಾತೇಯಿಲ್ಲ , ಧೈರ್ಯ ಮಾಡಿ ಕಳಚಿದರೂ
ಎಂದಿಗೂ ಮಾಸದ ನನ್ನನ್ನೇ ಅಣಕಮಾಡುವ ಅದರ ಗುರುತು
ಅದಕ್ಕೇ ನಿನ್ನಲ್ಲಿ ಈ ವಿನಂತಿ, ಬಳುವಳಿಯಲ್ಲಿ  ಬಂಧಿಯಾಗಿಸಬೇಡಮ್ಮ...