ಇಬ್ಬನಿ ತಬ್ಬಿದ
ಗುಲಾಬಿಯ ಕೆಂಬಣ್ಣವು
ಕೊಡಲಿಲ್ಲ ನಿನ್ನ ನೆನಪು!
ಪ್ರೇಮಕವಿತೆಗಳಿಗಂಟಿರುವ
ಒಲುಮೆಯ ಭಾವವೂ
ಕೊಡಲಿಲ್ಲ ನಿನ್ನ ನೆನಪು!

ತುಂತುರು ಹನಿ ಬಿದ್ದಾಗ
ಎದ್ದ ಬುವಿಯ ಕಂಪೂ
ತರಲಿಲ್ಲ ನಿನ್ನ ನೆನಪು!
ಮೆಲುವಾಗಿ ಬೀಸುವ
ತಂಗಾಳಿಯೂ
ತರಲಿಲ್ಲ ನಿನ್ನ ನೆನಪು!

ಬಟ್ಟೆಯಂಗಡಿಯ ಎದುರು
ತೂಗು ಹಾಕಿರುವ ಹಸಿರು ಸೀರೆಯೂ
ತರಲಿಲ್ಲ ನಿನ್ನ ನೆನಪು!
ಮುಸ್ಸಂಜೆ ಹೊತ್ತಲಿ
ಉದ್ಯಾನದಲಿ ಕುಳಿತಿರಲೂ
ಬರಲಿಲ್ಲ ನಿನ್ನ ನೆನಪು!

ಇಲ್ಲ ಗೆಳತಿ, ಯಾರೇನೇ ಅಂದರೂ
ಬರಲಾರದು ನಿನ್ನ ನೆನಪು,
ಬಾರದಂತೆ ನಾನೇ 'ಕಟ್ಟಿ ಹಾಕಿರುವೆ'
ನನ್ನೆದೆಯ ಗೂಡೊಳಗೆ!
ಹೊರಹೋಗದಂತೆ,
ಎಂದಿಗೂ, ಮಾಸಿ ಹೋಗದಂತೆ!