ಒಂದು ಒಂದೂವರೆ ವರುಷ ಹಿಂದಿರಬಹುದು. ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಎಲ್ಲಿ ನೋಡಿದರೂ ಧಾರವಾಡದ ಬಳಿ ಇರುವ ಅಣ್ಣಿಗೇರಿಯಲ್ಲಿ ಕಾಲುವೆಯ ಬಳಿ ತಲೆಬುರುಡೆಗಳ ರಾಶಿ ಎಂಬ ಸುದ್ದಿ ಕೇಳಿ ನೋಡಿ ಆಶ್ಚರ್ಯ ಕುತೂಹಲ ಎಲ್ಲ ಒಟ್ಟಿಗೆ ಆಗಿತ್ತು. ಎಲ್ಲಿಂದ ಬಂತು ಇಷ್ಟೊಂದು ಬುರುಡೆಗಳು. ಯಾವ ಕಾಲದ ಬುರುಡೆಗಳು ಇವು. ಸ್ವಾತಂತ್ರ್ಯದಲ್ಲಿ ಹೋರಾಡಿದವರ ಬುರುಡೆಗಳ, ಅಥವಾ ಯುದ್ಧದಲ್ಲಿ ಮೃತಪಟ್ಟವರ ಬುರುಡೆಗಳ ಹೀಗೆ ಹಲವಾರು ಯೋಚನೆಗಳು ತಲೆಯಲ್ಲಿ ಹೊಕ್ಕಿದ್ದವು. ನಾನು ಒಮ್ಮೆ ಏಕೆ ಹೋಗಿ ನೋಡಬಾರದು ಎಂಬ ಯೋಚನೆಯೂ ತಲೆಯಲ್ಲಿ ಬಂದು ಅಲ್ಲಿಗೆ ಹೋಗುತ್ತೇನೆಂದು ಮನೆಯಲ್ಲಿ ಕೇಳಿ ಬೈಸಿಕೊಂಡಿದ್ದು ಆಯಿತು. ಕಾಲ ಕಳೆದಂತೆ ಅದು ಮರೆತು ಹೋಯಿತು. ಅದರ ಬಗ್ಗೆ ಯೋಚನೆಯೂ ಬರಲಿಲ್ಲ. ಹೀಗಿರಬೇಕಾದರೆ ಮೊನ್ನೆ ಸಂಪದದಲ್ಲಿ ಪಾರ್ಥಸಾರಥಿಯವರ ತಿಂಗಳಿಗೊಂದು ದೆವ್ವದ ಕಥೆಯಲ್ಲಿ ಬುರುಡೆ ನಾಟಿ ಅಣ್ಣಿಗೇರಿಯಲ್ಲಿ ಓದಿದ ಮೇಲೆ ಅಷ್ಟೇ ಮತ್ತೆ ಅಣ್ಣಿಗೇರಿಯ ನೆನಪಾದದ್ದು. ಮತ್ತೆ ನನ್ನೊಳಗೆ ಒಮ್ಮೆ ಅಣ್ಣಿಗೇರಿಗೆ ಹೋಗಿ ನೋಡಿಕೊಂಡು ಬರಬೇಕು. ಆ ಬುರುಡೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕೆಂಬ ಆಸೆ ಚಿಗುರೊಡೆಯಿತು. ಮತ್ತೆ ಮನೆಯಲ್ಲಿ ಹೇಳಿದರೆ ಬಿಡುವುದಿಲ್ಲ ಎಂದು ಗೊತ್ತಿತ್ತು ಅದಕ್ಕೆ ಈ ಬಾರಿ ಏನೋ ಕೆಲಸದ ನೆಪ ಹೇಳಿ ಧಾರವಾಡಕ್ಕೆ ಹೋಗಿ ಬರುತ್ತೇನೆಂದು ಹೇಳಿ ಒಂದು ರಾತ್ರಿ ಹೊರಟೇಬಿಟ್ಟೆ.
ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಧಾರವಾಡದ