ಪರಿಸರ ನಾಶ! ಪರಿಸರ ನಾಶ! ಎಲ್ಲೆಡೆ ಗುಲ್ಲೋ ಗುಲ್ಲು,

"ರಕ್ಷಿಸುವ ಹೊಣೆ ಯಾರಿಗೂ ಬೇಡವೆ?", ಪ್ರಶ್ನಿಸಲು ಇಲ್ಲ ಸೊಲ್ಲು!!!

 

ಬರಿ ಬಾಯ್ಮಾತಲೇ ಹಾರಾಡುವರು, ಮನಸಲಿ ಮರುಕವೇ ಇಲ್ಲ!

ಮೊಸಳೆಯ ಕಣ್ಣೀರನು ಸುರಿಸುವರು, ಪರಿಸರ ರಕ್ಷಕರು ಇವರಲ್ಲ।

 

ಸಾರ್ವಜನಿಕ ಸಭೆ-ಸಮಾರಂಭದಲಿ, ತಡೆಯಲಾಗದು ಬಡಾಯಿಯ ಬಾಣ।

ಕಂಬಿಯೇ ಇಲ್ಲದೆ ಬಂಡಿ ಬಿಡುವರು, ಕೇಳಲಿಕ್ಕಾಗದು ಇವರ ಭಾಷಣ।

 

ಎಲ್ಲರೂ ಒಟ್ಟಾಗಿ ಯಾತ್ರೆ ನಡೆಸುವರು, ನೆಡುವರು ಒಂದೆರಡಾರು ಸಸಿ,

ವನಮಹೋತ್ಸವ ಮುಗಿಸಿ ಎಲ್ಲರೂ, ನಡೆವರು ಮನೆಗೆ ಕೈಬೀಸಿ।

 

ಮರುದಿನದಿಂದ ಗಿಡಗಳ ಪೋಷಣೆ ಆಗುವುದು ಬರಿ ಬಾಯ್ಮಾತಿನಲಿ।

ಪರಿಸರ ರಕ್ಷ್ಣೆಗೆ ನಿಂತ ವೀರರು ಯಾರೂ ಕಾಣರು ಇನ್ನಲ್ಲಿ!

 

ವನಮಹೋತ್ಸವ ಮಾಡುವರು, ಗಿಡಗಳ ಸಲಹುವೆವೆನ್ನುವರು,

ಗಿಡಗಳ ನೆಟ್ಟು - ಪೋಷಣೆ ಬಿಟ್ಟು - "ಒಣಮಹೋತ್ಸವ" ನಡೆಸುವರು!

 

ಮುಂದಾದರೂ ಬಡಾಯಿಯ ಬಿಟ್ಟು ಪರಿಸರವನ್ನು ರಕ್ಷಿಸುವ।

ಸೃಷ್ಟ್ಟಿಸಲು ನಮಗಾಗದಿದ್ದರೂ, ಭಕ್ಷಣೆಯಾದರೂ ತಪ್ಪಿಸುವ।