ಬಿಲ್ ಮುರಿದ, ಗೆದ್ದ, ಹೆಣ್ಣನ್ನೂ ರಾವಣನನ್ನೂ ,ಆಮೇಲೂ ಅಶ್ವಮೇಧ

ಮುರಿದ ಬಿಲ್ಲಿಗೆ ಬೆರಗಾದೆ, ಕಾಣದೇ ಉಬ್ಬಿದೆದೆ

ನಡೆದೆ ಅಯೋಧ್ಯೆಗೆ, ಕರೆಯುವ ಮೊದಲೇ ಕಾಡಿನೆಡೆಗೆ.

 

 

ಜಿಗ್ಗೆಲ್ಲವ ಜಗ್ಗಿ, ಹೊರೆಯೊಟ್ಟಿ ಹೊತ್ತು ತಂದು

ವಾಟೆಯ ಊಟಂಡೆಯನೂದಿ, ಒಲೆ ಉರಿಸಿದೆ

ಹಸಿ ಸೌದೆಯ ಹೊಗೆಗೂಡಿದ ಅಡಿಗೆ ಮನೆಯೊಳಗೂ

ಹಗೆ ಇರದ ಪ್ರೀತಿಯಲಿ ರಾಮನನು ತೋಯಿಸಿದೆ

ಹಸಿವು ನೀಗಿಸಿದೆ, ಹಾಸಿಗೆಯಾದೆ

ಚುಚ್ಚಿದ ಕಾರೆ ಮುಳ್ಳಿನ ಸೂಚನೆಯನ್ನೂ ನೀಡದೆ!

 

 

ಎಲ್ಲವನೂ ಗೆಲ್ಲುತ್ತಲೇ ಹೋದ, ಸೋಲಲಿಲ್ಲ ರಾಮ

ಸೋತು ಶರಣಾಗದೆ, ಸಣ್ಣವನಾಗದೆ, ಉಬ್ಬಿದೆದೆ ಠುಸ್ಸೆನ್ನದೆ

ಟಿಸಿಲೊಡೆದೀತೆ ಪ್ರೇಮ?

ಗುರಿ, ಗೆಲುವು, ಮಹದಾಸೆ, ಮಹತ್ವಾಕಾಂಕ್ಷೆ

ರಾಜಕಾರಣಿ ರಾಮ

ಸೋಲು, ಶರಣಾಗತಿ, ಸಹನೆ

ಸೀತೆಯಲ್ಲವೋ ಮೂರ್ತ ಪ್ರೇಮ!

 

 

ಎಳೆದೊಯ್ದವನ ತರಿದು ತಿನ್ನಲಿಲ್ಲ, ಕದಡಲಿಲ್ಲ

ರಾಮ ಕದ್ದೊಯ್ದಿರಬಹುದಾದ ಕನ್ಯತ್ವದ ಭೀತಿ

ದಾನವ ಸತ್ತ ಮೇಲಲ್ಲವೇ ದೇವರ ರಾಜ್ಯದಲ್ಲಿ ಬೇಕಾದ್ದು

ನಿನ್ನ ಶೀಲಕ್ಕೆ ರಸೀತಿ?

 

 

ಈಗಲಾದರೂ ಸರಿಪಡಿಸಿಕೋ ಸೀತೆ

ಅಶೋಕ ವನದೊಳಗೆ ಕುಳಿತು ಯೋಚಿಸುವ ರೀತಿ

ದಿಟ್ಟಿಸಿ ನೋಡಿದ್ದರೆ ಕಾಣಬಹುದಿತ್ತೇನೋ

ದೈತ್ಯನೊಳಗೆ ಹೆಡೆಯೆತ್ತಿದ, ವಿಷವಿರದ ಪ್ರೀತಿ!

 

 

ಹತ್ತುತಲೆಯವನೊಳಗೆ ಹುತ್ತುಗಟ್ಟಿತ್ತೇನೋ

ಒಂದೇ ಒಂದು ಹೃದಯ

ಕಾರಿಕೊಂಡಿದೆ ಈಗ, ತಿಳಿಯದೇ ಹೋದೆಯಲ್ಲೆ

ದೇವರೊಳಗಿದ್ದ ಎರಡು ತಲೆ ಹಾವಿನ ವಿಷಯ!

 

 

ಆದರೂ...

ಅಯೋಧ್ಯೆಯ ಆತ್ಮಕ್ಕೆ ಅನ್ನವಿಕ್ಕದಿರು

ಒಳಮನಸಿನಂಜಿಕೆಗೆ ಹಿಂಜರಿಕೆಯ ಪರದೆ ಕಟ್ಟದಿರು

ಅಡಿಯಿಡಬೇಡ, ಉರಿಯುವುದು, ಪಾದ ಬೊಬ್ಬಿರಿಯುವುದು

ಕೃಷ್ಣ ಕೃಷ್ಣಾ ಚೀರಿದರು, ಸೀರೆ ಸಿಗದು

ಕಲಿಯುಗದ ಅಗ್ನಿ ಅಪವಿತ್ರಗೊಂಡಿದೆ ಸೀತೆ!

 

 

ಶೀಲದ ಶಂಕೆಯ ಅಶ್ಲೀಲತೆಗೆ ಶಿಲುಬೆಗೇರದಿರು

ಕುರುಡಾಗಿ ಕೂಣಿಯೊಳು ನುಸುಳದಿರು

ರಾಮರಾಜಕಾರಣಕೆ ಮತವಾಗದಿರು

ಭಾರತದ ಮರುಳು ಪ್ರಜೆಯಾಗದಿರು

ಅವನ ಪತಿತ್ವಕ್ಕೆ ಸತಿ ಹೋಗಬೇಡ

ಸೂಳೆ ಎಂದರೂ ಸರಿಯೆ ನಲುಗದಿರು, ನನ್ನಮ್ಮನಂತವಳೆ ಸೀತೆ!