ನನ್ನ ಬರಿದಾಗಿಸಿ
ಬಲುದೂರ ನಿಂತು
ಹಂಗಿಸಿ ರಕ್ಕಸನಂತೆ
ಅಟ್ಟಹಾಸದಿ ನಕ್ಕವನು

    ಮನದಾಳದಲಿ ಮಾಸದ
    ಗಾಯವನು ಕೊರೆದು
    ಬಿಸಿರಕ್ತ ಕಾರುವುದ
    ನೋಡಿ ಖುಷಿಯಾದವನು

ಮುಂಚಿನದೆಲ್ಲವ ಮರೆತು
ನೀನಾರು ಎನಗೆಂದು
ಹುಚ್ಚು ನೋಟವ ಬೀರಿ
ಬಿರುನಡಿಗೆ ನಡೆದವನು

    ಪ್ರೇಮದುಂಬಿದ ಹೃದಯವ
    ಘಾಸಿಗೊಳಿಸಿದ ನೀನು
    ಹೊಳಪು ಕಂಗಳ
    ನೋಟವನು ಕೊಂದವನು

ನಾನಾಗಿ ಎಂದೂ
ಬಯಸದೇ ಬಂದು
ಕದಪುಗಳ ತೊಯ್ಯಿಸುವ
ಕಣ್ಣೀರ ಕೊಟ್ಟವನು

    ಬೆಲೆಯಿಲ್ಲದೊಲುಮೆಯ
    ನಿನಗಾಗಿ ಮುಡಿಪಿಟ್ಟೆ
    ನೀನಿಲ್ಲದೇನಿಲ್ಲ
    ಎಂದೆಲ್ಲ ಹಲುಬಿಟ್ಟೆ

ಯಾವ ಸುಖಕ್ಕಾಗಿ
ನಾ ನಿನ್ನ ಪಡೆದೆ?
ಯಾವ ತಪ್ಪಿಗಾಗಿ
ನೀ ನನ್ನ ತೊರೆದೆ?

                -ಉಷಾ