ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.
ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್ತಿದ್ದ ಆ ಲೈಬ್ರರಿಯಲ್ಲಿ ಜನ ಪ್ರತಿದಿನ ಕಿಕ್ಕಿರುತ್ತಿರುತ್ತಿದ್ದರು. ಹೊಸ ಪುಸ್ತಕಗಳ ಹೊದಿಕೆಗಳನ್ನು ಪೋಣಿಸಿ ಬಂಟಿಂಗ್ಸ್ ತರಹ ನೇತು ಹಾಕಿರುತ್ತಿರುತ್ತಿದ್ದರು. ತ್ರಿವೇಣಿ, ಕಾರಂತರು, ಎಂ.ಕೆ.ಇಂದಿರಾ ಜೊತೆಜೊತೆಯಾಗಿಯಾಗಿಯೇ,ಎನ್. ನರಸಿಂಹಯ್ಯ ಕೂಡ ಅಲ್ಲಿಯ ಅತಿ ಜನಪ್ರಿಯ ಲೇಖಕರುಗಳಲ್ಲಿ ಮುಖ್ಯರಾಗಿದ್ದರು.
ಆಗ ನಾನು ಮಿಡಲ್ ಸ್ಕೂಲ್ ನಲ್ಲಿದ್ದೆ. ನಮ್ಮನೆಯಲ್ಲೇ ಇದ್ದ , ನನಗಿಂತ ಮೂರು ನಾಲ್ಕು ವರ್ಷ ಹಿರಿಯನಾದ, ನಮ್ಮ ಅತ್ತೆಯ ಮಗ ಈ ಲೈಬ್ರರಿಯ ಸದಸ್ಯ ಆಗಿದ್ದ. ಯಾವಾಗಲೂ ಪುಸ್ತಕ ತರುತ್ತಿದ್ದ. ಆ ಪುಸ್ತಕಗಳಲ್ಲಿ ಎನ್. ನರಸಿಂಹಯ್ಯನವರ ಪುಸ್ತಕಗಳೂ ಇರುತ್ತಿದ್ದವು. ನನಗೆ ಕನ್ನಡ ಪುಸ್ತಕ ಓದು ಹುಚ್ಚು ಹತ್ತಿದ್ದು ಆಗ. ಅದಕ್ಕೆ ಮುಖ್ಯ ಕಾರಣ ಎನ್. ನರಸಿಂಹಯ್ಯ. ಸರಳವಾದ ಕನ್ನಡದಲ್ಲಿ, ರೋಚಕವಾಗಿ, ಹೊಸ ಹೊಸ ಸಾಹಸಗಳ ಆ ಕಥೆಗಳನ್ನು ಓದುವುದರಲ್ಲಿ ಮೈ ಮರೆಯುತ್ತಿದ್ದೆ. ಯಾವುದೇ ಕೊಲೆಯನ್ನು, ದರೋಡೆಯನ್ನು, ಅಪರಾಧವನ್ನು ಲೀಲಾಜಾಲವಾಗಿ ಪತ್ತೆಮಾಡುತ್ತಿದ್ದ, ಸದ್ಗುಣ ಸಂಪನ್ನರಾಗಿದ್ದ ಪತ್ತೇದಾರ ಪುರುಷೋತ್ತಮ, ಮಧುಸೂದನ, ಅರಿಂಜಯ ಇವರೆಲ್ಲಾ ನನ್ನ ಹೀರೋಗಳಾಗಿದ್ದರು.
ಬರಿ ಕೊಲೆ, ದರೋಡೆ ಕಥೆಗಳಲ್ಲದೆ, ದೆವ್ವ, ಭೂತ ಮಾಟ, ಮಂತ್ರ , ವಶೀಕರಣ ಮೊದಲಾದ ನಮಗೆ ಸಂಪೂರ್ಣ ಅಪರಿಚಿತವಾದ ಅದ್ಭುತ ಪ್ರಪಂಚವನ್ನು ನನಗೆ ತೆರೆದಿಟ್ಟವರು ನರಸಿಂಹಯ್ಯ.ಅವರ “ಭಯಂಕರ ಬೈರಾಗಿ” ಪುಸ್ತಕ ಪ್ರಕಟವಾದಾಗ ಅದನ್ನು ಓದಲಿಕ್ಕೆ ನಮ್ಮ ಲೈಬ್ರರಿಯಲ್ಲಿ ಕ್ಯೂ ಇತ್ತು!. ದೆವ್ವ (ಅದು ಸಾಧಾರಣವಾಗಿ ಹೆಣ್ಣು ದೆವ್ವ- ಯಾಕೋ ಗೊತ್ತಿಲ್ಲ) ತಲೆಗೂದಲನ್ನು ಬಿರಿಹೊಯ್ದುಕೊಂಡಿರುತ್ತದೆ, ಅದರ ಕಾಲು ಹಿಂದುಮುಂದಾಗಿರುತ್ತದೆ, ಅದು ಧಗಧಗ ಉರಿಯುತ್ತಿರುವ ಒಲೆಯಲ್ಲಿ , ಒಲೆಯೊಳಗೇ ಕಾಲಿಟ್ಟುಕೊಂಡು ಬೆಂಕಿ ಕಾಸುತ್ತಿರುತ್ತದೆ, ಅದು ಬೇಕಾದ ರೂಪವನ್ನು ಬೇಕಾದಾಗ ಪಡೆಯಬಲ್ಲದು, ತಕ್ಷಣ ಮಾಯವಾಗಬಲ್ಲದು ಇತ್ಯಾದಿ ವಿಷಯಗಳು ನನಗೆ ಗೊತ್ತಾದದ್ದೇ ನರಸಿಂಹಯ್ಯನವರ ಕಾದಂಬರಿಗಳ ಮೂಲಕ !.
ಒಟ್ಟು ಅವರ ಸುಮಾರು ಇನ್ನೂರು, ಮುನ್ನೂರು ಕಾದಂಬರಿಗಳನ್ನು ನಾನು ಓದಿರಬಹುದು. ಹಾಗೆ ಹಿಡಿಸಿಕೊಡ ಓದುವ ಹುಚ್ಚು ಮುಂದೆ ತ್ರಿವೇಣಿ, ಎಂ.ಕೆ.ಇಂದಿರಾ, ಶಿವರಾಮ ಕಾರಂತ, ಭೈರಪ್ಪ, ಅನಂತಮೂರ್ತಿ, ಲಂಕೇಶ ಹೀಗೆ ವಿಸ್ತರಿಸುತ್ತಾ ಹೋಯಿತು. ಬೆಳೆದಂತೆ ನರಸಿಂಹಯ್ಯನವರ ಕಾದಂಬರಿಗಳ ಹುಚ್ಚು ಬಿಟ್ಟು ಹೋಯಿತು.
ಇಷ್ಟಾದರೂ ನರಸಿಂಹಯ್ಯನವರು ಮಾತ್ರಾ ನಿಗೂಢವಾಗಿಯೇ ಉಳಿದಿದ್ದರು. ಅವರ ಬಗ್ಯೆ ಸುದ್ದಿ, ಫೋಟೋಗಳು ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ. ಅವರಿಗೆ ಸನ್ಮಾನ, ಪ್ರಶಸ್ತಿ ಇತ್ಯಾದಿ ಯಾವುದೂ ಬಂದ ಬಗ್ಯೆ ನಾನು ಓದಲಿಲ್ಲ. ಅವರ ಫೋಟೋ ನೋಡಿದ್ದು ಅನೇಕ ವರ್ಷಗಳ ನಂತರ.
ನರಸಿಂಹಯ್ಯ ಭಾಷೆ ಸರಳ. ಅವರ ಕಥಾ ವಸ್ತು ಸರಳ. ಈಗ ಓದಿದರೆ ಬಹುಷ: ಅಯ್ಯೋ ಇಷ್ಟೇನೇ ಅನ್ನಿಸಲಿಕ್ಕೂ ಸಾಕು. ಅವರ ಕಾದಂಬರಿಗಳ ಕಾಗದ ಅಗ್ಗದ್ದು. ಅದರ ಬೆಲೆ ಕೂಡ ಕಡಿಮೆಯೇ. ಅವರ ಪುಸ್ತಕ ರಾಶಿಗೆ ಜ್ಞಾನಪೀಠ, ಅಕಾಡೆಮಿ ಪ್ರಶಸ್ತಿ ಇತ್ಯಾದಿ ಬರುವುದಿಲ್ಲ. ಅವರ ಹೊತ್ತಗೆಗಳನ್ನು ವಿಮರ್ಶಕರು ಚರ್ಚಿಸುವುದಿಲ್ಲ, ಸಾಹಿತ್ಯ ಸಂಕಿರಣಗಳಲ್ಲಿ ಅವರ ಪುಸ್ತಕಗಳ ಬಗ್ಯೆ ಪ್ರಬಂಧ ಮಂಡನೆಯಾಗುವುದಿಲ್ಲ.
ಇಷ್ಟಾದರೂ , ನರಸಿಂಹಯ್ಯನವರು ನನಗೆ ತಮ್ಮ ರೋಚಕ , ಸರಳ ಭಾಷೆಯ, ಅಗ್ಗದ, ಪುಸ್ತಕಗಳ ಮೂಲಕ ನಮ್ಮದೇ ಕನ್ನಡ ಭಾಷೆಯಲ್ಲಿ, ಬೆರಗಿನ ಹೊಸಪ್ರಪಂಚವನ್ನು ಪರಿಚಯ ಮಾಡಿಸಿದರು. ಇನ್ನೂ ಮುಂದುವರಿದಿರುವ , ಕನ್ನಡ ಪುಸ್ತಕ ಓದುವ ಗೀಳು ಹತ್ತಿಸಿದರು. ಕನ್ನಡದ ಅಕ್ಷರ ಪ್ರಪಂಚದಲ್ಲಿ ಆತ್ಮೀಯತೆ ಉಂಟುಮಾಡಿದರು.
ಈ ಮಾತು ನನಗೊಬ್ಬನಿಗೇ ಅಲ್ಲ, ನನ್ನ ಪೀಳಿಗೆಯ ಸಾವಿರಾರು ಮಕ್ಕಳಿಗೂ ಅನ್ವಯವಾಗುವಂತಹುದು. ನಮ್ಮನ್ನು ಕನ್ನಡ ಪುಸ್ತಕ ಪ್ರಪಂಚಕ್ಕೆ ಆಕರ್ಷಿಸಿ, ನಮ್ಮಲ್ಲಿ ಕನ್ನಡದ ಪ್ರೀತಿ ಹೊತ್ತಿಸಿದರು. ತನ್ಮೂಲಕ ಕನ್ನಡಮ್ಮನ ಕೈಂಕರ್ಯವನ್ನು ತನ್ನದೇ ರೀತಿಯಲ್ಲಿ ಮಾಡಿದರು.
ಅಜ್ಞಾತವಾಗಿ ಅರಳಿ, ಈಚೆಗೆ ಉದುರಿಹೋದ ಈ ಕಾಡಿನ ಹೂವು ಬೀರಿದ ಕಂಪು ಮಾತ್ರಾ ಮರೆಯುವಂಥದ್ದಲ್ಲ.
ಎನ್. ನರಸಿಂಹಯ್ಯನವರಿಗೆ ಈ ಮೂಲಕ ನನ್ನ ಒಂದು ಸಣ್ಣ ನುಡಿ ನಮನ.
ನಾರಾಯಣ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆ0ಗಳೂರಿನಲ್ಲಿ ಕನ್ನಡ ಭಾಷೆ
ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ
ಸಂಪದದಲ್ಲಿ ಮೂರು ವರುಷ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (8)