ಸ್ವರ್ಣವಲ್ಲಿ ತೀರ್ಥಪಾದರು ನಾಡಿನಾದ್ಯಂತ ಹಮ್ಮಿಕೊಂಡಿದ್ದ ಭಗವದ್ಗೀತಾ ಜಾಗೃತಿ ಅಭಿಯಾನ, ಬೆಂಗಳೂರಿನಲ್ಲಿ ಜನವರಿ 8ರಂದು ಪರಿಸಮಾಪ್ತಿಯಾಗಲಿದೆ. ’ಯಶಸ್ವಿಯಾಗಿ’ ಎಂಬ ಕ್ರಿಯಾ ವಿಶೇಷಣವನ್ನೂ ಭಾಷಣಕಾರರು ಬಳಸಲಾರದೆ ಇರರರು. ಇದಕ್ಕೆ ’ತಪ್ಪು-ಸರಿ’ ಎಂಬ, ’ಹೌದು-ಅಲ್ಲ’ಗಳೆಂಬ ಪೂರ್ವಪಕ್ಷವನ್ನೇನೂ ಹಾಕುವ ಅಗತ್ಯವಿಲ್ಲ; ಎಷ್ಟಾದರೂ ಅದು ಸಾಪೇಕ್ಷ!
ದೂರದ ಸೈಬೀರಿಯಾ ಕೋರ್ಟಿನಲ್ಲೋ, ಕೋಲಾರದ ಕೋರ್ಟಿನಲ್ಲೋ ಭಗವದ್ಗೀತೆ ಸಂಬಂಧ ಕೇಸುಗಳು ದಾಖಲಾದದ್ದಕ್ಕೂ, ಭಾವಿಕರ ಅನುಭಾವಕ್ಕೂ ಸಹಜ ಸಂಬಧವೇನೇನೂ ಇಲ್ಲ. ಹಾಗೊಂದು ಸಂಬಂಧ ಕಲ್ಪಿಸುವುದು, ಒಂದಾ ಅರ್ಥಹೀನ ಮತಾಭಿಮಾನಿಗಳ ಮೂರ್ಖತನ; ಇಲ್ಲಾ ಲಾಭಬಡುಕ ರಾಜಕಾರಣದ ನಯವಂಚಕತನ. ಭಗವದ್ಗೀತೆಯಲ್ಲಿ ಸತ್ಯದರ್ಶನವಿಲ್ಲ ಎಂಬ ಆರೋಪ ದುಂಡಾವರ್ತಿಯೆಂದು ಒಪ್ಪೋಣ; ಹಾಗೆಯೇ ಭಗವದ್ಗೀತೆಯಲ್ಲಿ ಹೇಳಿರುವುದು ಮಾತ್ರಾ ಸತ್ಯವೆಂದು ನಂಬಿಕೊಳ್ಳುವುದು ಬುದ್ದಿ ಸೋಂಬೇರಿತನ. ಭಗವದ್ಗೀತೆಯಲ್ಲಿ ಪ್ರಕ್ಷಿಪಿ, ಪಾಠಾಂತರಗಳೂ ಹೇರಳವಾಗಿ ಸೇರಗಡೆಯಾಗಿವೆ; ಸಜವಾಗೇ ಇದು ತತ್ಪರಿಣಾಮವಾದ ವಿರೋಧಾಭಾಸಗಲಿಗೆ ಎಡೆಮಾಡಿಕೊಟ್ಟಿದೆ. ಪ್ರಸ್ಥಾನತ್ರಯಗಳ ಜಿಜ್ಞಾಸೆಯಿಂದಾರಂಭಿಸಿಯೇ ಆಚಾರ್ಯತ್ರಯರು ಸ್ವತಂತ್ರ ದರ್ಶನಾನುಭಾವಗಳನ್ನು ಕಂಡುಕೊಂಡಿರುವುದು. ಆದರೆ ನಂತರದ ಆಢ್ಯ ವ್ಯಾಖ್ಯಾನಕಾರರು, ಈ ಕಾಣ್ಕೆಗಳನ್ನು ವೇದೋಪನಿಷತ್ತುಗಳ ಚೌಕಟ್ಟಿಗೆ ಎರಕ ಹೊಯ್ಯಲೆತ್ನಿಸಿ ಮಂಡನ, ಖಂಡನ, ಮುಂಡನಗಳ ಫೂಟ್ಲಾಯರಿಯಲ್ಲಿ, ದಾರ್ಶನಿಕ ಆನುಭಾವವನ್ನು ಹಳ್ಳಹಿಡಿಸಿಟ್ಟರು; ಇದು ಮತಭೇದ, ಜಾತಿಭೇದ, ಪಙ್ತಿಭೇದಗಳಿಗೆ, ಭಿನ್ನ ಮತಕ್ಕೆ ಎಡೆಮಾಡಿಕೊಟ್ಟಿತು. ಇದರಿಂದ ಯವನರಾಗಲೀ, ಫಿರಂಗಿಯವರಾಗಲೀ ಹಿಂದೂ ಧರ್ಮವನ್ನು ಹಳಿಯಲು, ಹಣಿಯಲು ಅವಕಾಶವಾಯಿತು.
ಆದ್ದರಿಂದ ಭಗವದ್ಗೀತೆ ಮತ್ತು ದಶೋಪನಿಷತ್ತುಗಳು ಮಾತ್ರವೇ ಉನ್ನತವೆಂದು ಎತ್ತಿ ಹಿಡಿಯದೆ, ಹರಿದಾಸ-ಶಿವಶರಣರ ಅನುಭಾವ ಸಾಹಿತ್ಯವೂ, ತಮಿಳು ಶರಣರ ತೇವಾರ, ದಿವ್ಯಪ್ರಬಂಧಗಳೂ, ಕಬೀರ-ರವಿದಾಸಾದಿಗಳ ನಿಗೂಢ ವಿನಿಕೆಗಳೂ ಸಹಜ, ಸಮಾನ, ಸಾಮೂಹಿಕ-ಸಾಮಾಜಿಕ ಭಾವಾನುಭಾವಗಳೆಂದು ಸಲಕಲರಿಗೆ ತಿಳಿಹೇಳುವುದು, ಸದುದ್ದೇಶವೆನಿಸಲಾರದೇ?
ಭಗವದ್ಗೀತಾ ಅಭಿಯಾನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!