ಶ್ಯಾಮರಾಯರು ಈಗ ಮೊದಲಿನಂತೆ ಲವಲವಿಕೆ ಇಂದ ಇರಲಿಲ್ಲ. ಅದಕ್ಕೆ ಒಂದು ಕಾರಣವೂ ಇತ್ತು. ಕಳೆದ ತಿಂಗಳಷ್ಟೇ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ನಡೆದಿತ್ತು. ಅದಾದ ಮೇಲೆ ರಾಯರು ಬಹಳ ಮೆತ್ತಗಾಗಿ ಬಿಟ್ಟಿದ್ದರು. ರಾಯರಿಗೆ ವಯಸ್ಸು ಎಪ್ಪತ್ತೈದು ದಾಟಿದ್ದರೂ ಯಾರ ಮೇಲೂ ಅವಲಂಬಿತವಾಗಿರಲಿಲ್ಲ. ತಾವೇ ಸ್ಥಾಪಿಸಿದ್ದ ಕಂಪನಿಯ ಜವಾಬ್ದಾರಿಯನ್ನು ಇದ್ದ ಒಬ್ಬನೇ ಒಬ್ಬ ಮಗನಾದ ಪ್ರಸಾದನಿಗೆ ವಹಿಸಿಕೊಟ್ಟಿದ್ದರು. ಲೆಕ್ಕಕ್ಕೆ ಮಗನಿಗೆ ಜವಾಬ್ದಾರಿ ಕೊಟ್ಟಿದ್ದರೂ ತಾವೂ ಸಹ ಬಂದು ಕಚೇರಿಯಲ್ಲಿ ಕುಳಿತು ಕೊಳ್ಳುತ್ತಿದ್ದರು. ಪ್ರಸಾದ್ ಎಷ್ಟು ಬಾರಿ ತಂದೆಗೆ ಇನ್ನು ನೀವು ಮನೆಯಲ್ಲಿ ಆರಾಮಾಗಿ ಇರಬಹುದಲ್ಲವೇ ಎಂದು ಹೇಳಿದ್ದರೂ ಕೇಳುತ್ತಿರಲಿಲ್ಲ. ಬದಲಿಗೆ ಅವನಿಗೆ ಹೇಳುತ್ತಿದ್ದರು. ನೋಡು ನನ್ನ ಕಂಪನಿ ನನ್ನ ಇಷ್ಟ ನಾನು ಬದುಕಿರುವವರೆಗೂ ಬರುತ್ತೇನೆ. ನಿಮ್ಮ ಅನುಕಂಪ ನನಗೆ ಬೇಡ ಎಂದುಬಿಡುತ್ತಿದ್ದರು. ರಾಯರು ಮುಂಚಿನಿಂದಲೂ ಬಹಳ ನೇರ ನುಡಿಯ ಮನುಷ್ಯ. ಅದು ಮನೆಯವರಿರಬಹುದು ಹೊರಗಿನವರು ಇರಬಹುದು ಯಾರ ಮುಂದೆಯೂ ತಲೆ ತಗ್ಗಿಸುತ್ತಿರಲಿಲ್ಲ. ಅಂಥಹ ರಾಯರು ಈಗ ಮನೆಯಿಂದ ಆಚೆ ವಾಕಿಂಗ್ ಹೋಗಬೇಕಾದರೂ ಜೊತೆಯಲ್ಲಿ ಯಾರನ್ನಾದರೂ ಕರೆದುಕೊಂಡು ಹೋಗಬೇಕಿತ್ತು. ರಾಯರ ಧರ್ಮಪತ್ನಿ ಸರಸ್ವತಮ್ಮ. ಗಂಡನ ಸ್ವಭಾವ ಚೆನ್ನಾಗಿ ಅರಿತಿದ್ದ ಅವರು ಯಾವುದೇ ವಿಷಯಕ್ಕೂ ರಾಯರಿಗೆ ಎದುರುತ್ತರ ಕೊಡುತ್ತಿರಲಿಲ್ಲ. ರಾಯರು ಏತಿ ಅಂದರೆ ಏತಿ ಪ್ರೇತಿ ಅಂದರೆ ಪ್ರೇತಿ ಎನ್ನುವುದನ್ನು ೪೦ ವರ್ಷಗಳಿಂದ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದರು. ರಾಯರಿಗೆ ಚಿಕಿತ್ಸೆ ಮುಗಿದು ಮನೆಗೆ ಬಂದಾಗಿನಿಂದ ಸರಸ್ವತಮ್ಮನವರು ಪ್ರತಿದಿನ ರಾಯರನ್ನು ಸ್ವಲ್ಪ ದೂರ ವಾಕಿಂಗ್ ಗೆಂದು ಕರೆದೊಯ್ಯುತ್ತಿದ್ದರು.
ಅಂದು ರಾತ್ರಿ ಊಟ ಮಾಡಿ ಮಲಗುವಾಗ ರಾಯರು ಸರಸ್ವತಮ್ಮನನ್ನು ಕುರಿತು 'ನೋಡೇ ನಾಳೆ ಬೆಳಿಗ್ಗೆ ನಾನು ಒಬ್ಬನೇ ವಾಕಿಂಗ್ ಗೆ ಹೋಗುತ್ತೇನೆ, ನೀನು ಬರುವುದು ಬೇಡ' ಎಂದರು. ಸರಸ್ವತಮ್ಮನವರು ಅಲ್ಲ ಇವರೇ ಅದು ಡಾಕ್ಟರ ಒಬ್ಬರನ್ನೇ ಎಲ್ಲೂ ಕಳುಹಿಸಬೇಡಿ ಎಂದು ಹೇಳಿದ್ದರೆ ಎಂದು ತಲೆ ತಗ್ಗಿಸಿಕೊಂಡೆ ಹೇಳಿದರು. ಅದಕ್ಕೆ ರಾಯರು "ಹೌದೌದು ಡಾಕ್ಟರ ಗೇನು ಎಲ್ಲ ಹೇಳುತ್ತಾರೆ. ಎಷ್ಟು ದಿನ ಅಂತ ಹೀಗೆ, ನಾನು ಒಬ್ಬನೇ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ. ಇಷ್ಟು ವರ್ಷ ನೀನೆ ನನ್ನ ಜೊತೆ ವಾಕಿಂಗ್ ಗೆ ಬರುತ್ತಿದ್ದೀಯ, ನಾನು ಒಬ್ಬನೇ ಹೋಗುತ್ತಿರಲಿಲ್ಲವೇ. ನಾಳೆಯಿಂದ ನಾನು ಒಬ್ಬನೇ ಹೋಗುತ್ತೇನೆ' ಎಂದರು. ಸರಸ್ವತಮ್ಮನವರಿಗೆ ಉತ್ತರಿಸಲು ಏನೂ ಇರಲಿಲ್ಲ. ಪ್ರಸಾದ್ ಏನೋ ಹೇಳಲು ಬಾಯತೆರೆದ. ಅಷ್ಟರಲ್ಲಿ ತಾಯಿ ಕಣ್ಸನ್ನೆಯಲ್ಲೇ ಸುಮ್ಮನಿರು ಎಂದರು. ತಕ್ಷಣ ಸುಮ್ಮನಾದ.
ಮರುದಿನ ಬೆಳಿಗ್ಗೆ ಆರು ಗಂಟೆಗೆಲ್ಲ ವಾಕಿಂಗ್ ಸ್ಟಿಕ್ ಕೈಯಲ್ಲಿ ಹಿಡಿದು, ಕಿವಿಗೆ ಗಾಳಿ ಹೋಗದಿರಲೆಂದು ಮಫ್ಲರ್ ಸುತ್ತಿಕೊಂಡು ಹೊರಟೆ ಬಿಟ್ಟರು. ಸರಸ್ವತಮ್ಮ ಹೊರಡುವ ಮುನ್ನ ಮೆದು ದನಿಯಲ್ಲಿ ಹುಷಾರು ಎಂದರು. ಅದಕ್ಕೆ ಆಯ್ತು ಆಯ್ತು ಎಂದು ಹೇಳಿ ಹೊರಟರು. ಒಂದು ತಿಂಗಳಿಂದ ಮಡದಿಯ ಜೊತೆ ಮಾತಾಡಿಕೊಂಡು ವಾಕಿಂಗ್ ಬರುತ್ತಿದ್ದ ರಾಯರಿಗೆ ಅಂದು ಯಾಕೋ ಬಿಕೋ ಎನಿಸುತ್ತಿತ್ತು. ಪಾರ್ಕಿಗೆ ಬಂದು ಒಂದೆರೆಡು ಸುತ್ತು ಹಾಕಿ ಸ್ವಲ್ಪ ಸುಸ್ತು ಎನಿಸಿ ಅಲ್ಲೇ ಇದ್ದ ಕಲ್ಲು ಬೆಂಚಿಗೆ ಒರಗಿಕೊಂಡು ಕಣ್ಣು ಮುಚ್ಚಿದರು.
ಸ್ವಲ್ಪ ಹೊತ್ತಿನ ನಂತರ ಕಣ್ಣು ಬಿಟ್ಟ ರಾಯರಿಗೆ ಒಂದು ಕ್ಷಣ ಗಾಭರಿ ಆಯಿತು. ಸುತ್ತಲೂ ಕತ್ತಲಾವರಿಸಿತ್ತು. ಇದೇನಿದು ಎಂದು ಮತ್ತೆ ಕಣ್ಣುಜ್ಜಿ ಕೊಂಡು ಕಣ್ತೆರೆದರು. ತಕ್ಷಣ ಆಶ್ಚರ್ಯವಾಯಿತು ಇದೇನಿದು ಎಲ್ಲಿದ್ದೇನೆ ನಾನು, ನಾನು ಪಾರ್ಕಿನಲ್ಲಿ ವಾಕಿಂಗ್ ಗೆಂದು ಬಂದದ್ದು ಇದೇನಿದು ಇಲ್ಲಿ ಮರುಭೂಮಿ ಕಾಣಿಸುತ್ತಿದೆ. ಸುತ್ತಲೂ ಬರೀ ಮರಳು ಮರಳು ಮರಳು. ಅಷ್ಟು ಬಿಟ್ಟು ಬೇರೇನೂ ಕಾಣುತ್ತಿಲ್ಲ. ಇದೇನಪ್ಪ ಎಂದು ಭಯವಾಗಿ ಒಂದು ಸಲ ತಮ್ಮ ಬಲವೆಲ್ಲ ಬಿಟ್ಟು ಜೋರಾಗಿ ಯಾರಾದರೂ ಇದ್ದೀರಾ ಇಲ್ಲಿ ಎಂದು ಕೂಗಿದರು. ಆದರೆ ಯಾವುದೇ ದನಿ ಕೇಳಲಿಲ್ಲ. ಯಾಕೋ ರಾಯರಿಗೆ ಗಾಭರಿ ಯಾಗಿ ಹಾಗೆ ಸ್ವಲ್ಪ ಮುಂದೆ ಬಂದರು, ಎಷ್ಟು ನಡೆದರೂ ತಾವು ನಿಂತಲ್ಲೇ ಇದ್ದಂತೆ ಭಾಸವಾಗುತ್ತಿತ್ತು. ಮತ್ತೊಮ್ಮೆ ಜೋರಾಗಿ ಸರಸ್ವತಿ, ಪ್ರಸಾದ್ ಎಂದು ಕೂಗಿದರು. ಊಹು.....ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗೆ ಇನ್ನು ಸ್ವಲ್ಪ ಮುಂದೆ ಬಂದರು ಅಲ್ಲೊಂದು ದೊಡ್ಡ ನದಿ ಕಾಣಿಸಿತು. ನದಿಯ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಮರಗಳು, ಹಣ್ಣಿನ ಮರಗಳು, ಅಲ್ಲೇ ಪಕ್ಕದಲ್ಲಿ ಒಂದಷ್ಟು ಜನರು ನಿಂತು ಹಣ್ಣು ತಿನ್ನುತ್ತಿದ್ದರು. ರಾಯರಿಗೆ ಒಂದು ಕ್ಷಣ ಅಚ್ಚರಿ ಎನಿಸಿತು, ಇದೇನಿದು ಮರುಭೂಮಿಯಲ್ಲಿ ನದಿ ಹಣ್ಣಿನ ಮರಗಳು ಒಂದೂ ಅರ್ಥವೇ ಆಗುತ್ತಿಲ್ಲ. ಹೋಗಲಿ ಜನ ಕಂಡರಲ್ಲ ಅವರನ್ನಾದರೂ ಮಾತಾಡಿಸೋಣ ಎಂದು ಅವರ ಹತ್ತಿರ ಬಂದು ಅವರನ್ನು ಕರೆದರು ' ನೋಡಿ ಸ್ವಲ್ಪ ಇದು ಯಾವ ಪ್ರದೇಶ ಎಂದು ತಿಳಿಸುತ್ತೀರಾ, ನಾನು ಚಾಮರಾಜಪೇಟೆ ಗೆ ಹೋಗಬೇಕು. ಬಹುಶ ನಾನು ದಾರಿ ತಪ್ಪಿ ಬಂದಿದ್ದೇನೆ" ಎಂದರು. ಆದರೆ ಅಲ್ಲಿದ್ದ ಮಂದಿ ಒಬ್ಬರೂ ಇವರ ಕಡೆ ತಿರುಗಿ ನೋಡಲಿಲ್ಲ. ಬಹುಶ ತಾವು ಕೂಗಿದ್ದು ಅವರಿಗೆ ಕೇಳಿಸಿಲ್ಲವೇನೋ ಎಂದುಕೊಂಡು ಅವರ ಪಕ್ಕಕ್ಕೆ ಬಂದು ಅವರನ್ನು ಮುಟ್ಟಿ ಕರೆದರು. ಆದರೂ ಅವರು ತಿರುಗಿಯೂ ನೋಡಲಿಲ್ಲ. ತಕ್ಷಣ ರಾಯರು ಬಹುಶ ಇದು ಕನಸೋ ಎಂದುಕೊಂಡು ತಮ್ಮ ಕೈಯನ್ನು ತಾವೇ ಒಮ್ಮೆ ಜಿಗುಟಿಕೊಂಡರು. ನೋವಾಯಿತು. ಅರೆ ಇದು ಕನಸಲ್ಲ. ಹಾಗಿದ್ದರೆ ನಾನು ಎಲ್ಲಿದ್ದೇನೆ ಎಂದು ಯೋಚಿಸುತ್ತ ಮುಂದೆ ನಡೆಯುತ್ತಿದ್ದರು.
ಇತ್ತ ಮನೆಯಲ್ಲಿ ಸಮಯ ಎಂಟಾದರೂ ಇನ್ನು ಮನೆಗೆ ಬಂದಿಲ್ಲವಲ್ಲ ರಾಯರು ಎಂದು ಕಳವಳಗೊಂಡಿದ್ದರು ಸರಸ್ವತಮ್ಮ. ಮಗನ ಬಳಿ ಹೇಳುತ್ತಿದ್ದರು ನಿಮ್ಮಪ್ಪ ಹೇಳಿದ ಮಾತು ಕೇಳುವುದಿಲ್ಲ, ಆರು ಗಂಟೆಗೆ ಹೋದವರು ಪ್ರತಿದಿನ ಒಂದು ಗಂಟೆಯಷ್ಟೇ ವಾಕಿಂಗ್ ಮಾಡಿಕೊಂಡು ಬರುತ್ತಿದ್ದವರು ಇವತ್ತು ಎರಡು ಗಂಟೆಯಾದರೂ ಇನ್ನು ಮನೆಗೆ ಬಂದಿಲ್ಲ ಪ್ರಸಾದು. ಒಂದು ಸಲ ನೀನೆ ಹೋಗಿ ಪಾರ್ಕ್ ಹತ್ತಿರ ನೋಡಿಕೊಂಡು ಬಾ ಎಂದರು. ಸರಿ ಅಮ್ಮ ನನಗೆ ತಿಂಡಿ ಕೊಡು ತಿಂದುಕೊಂಡು ನಾನು ಆಫೀಸಿಗೆ ಹೋಗಬೇಕಾದರೆ ನೋಡಿಕೊಂಡು ಹೋಗುತ್ತೇನೆ. ದಾರಿಯಲ್ಲಿ ಯಾರಾದರೂ ಸ್ನೇಹಿತರು ಸಿಕ್ಕಿರಬಹುದು ಅವರಿಗೂ ಶನಿ ಬಿಡಿಸುತ್ತಿರಬಹುದು ಅಪ್ಪ ಎಂದು ನಕ್ಕ. ಸರಸ್ವತಮ್ಮನವರೂ ಸಣ್ಣಗೆ ನಕ್ಕು ತಿಂಡಿ ತಂದು ಮಗನ ಕೈಗಿಟ್ಟರು.
ಇತ್ತ ರಾಯರು ನಡೆಯುತ್ತಲೇ ಇದ್ದರು. ಇಷ್ಟು ನಡೆದರೂ ಇವತ್ತು ಯಾಕೆ ಬೆವರೇ ಬರುತ್ತಿಲ್ಲ ನನಗೆ ಎಂದು ಹಣೆ ಮುಟ್ಟಿ ನೋಡಿಕೊಂಡರು. ಹಾಗೆ ಮುಂದೆ ಬಂದು ನದಿಯ ದಡಕ್ಕೆ ಬಂದರು. ಎತ್ತ ಹೋಗುವುದೆಂದು ಗೊತ್ತಾಗದೆ ಅಲ್ಲೇ ಯೋಚಿಸುತ್ತಾ ನಿಂತಿದ್ದಾಗ ಹಿಂದಿನಿಂದ ಯಾರೋ ರಾಯರೇ, ರಾಯರೇ ಎಂದು ಕರೆದಂತಾಯಿತು. ತಿರುಗಿ ನೋಡಿದರೆ ಇಬ್ಬರು ಘಟಾನುಘಟಿಗಳು ನನ್ನ ಬಳಿಯೇ ಬರುತ್ತಿದ್ದರು.
ಇತ್ತ ಮಗ ಪ್ರಸಾದ್ ತಿಂಡಿ ತಿಂದು ಅಮ್ಮ ನಾನು ಆಫೀಸಿಗೆ ಹೊರಟೆ, ಹಾಗೆ ದಾರಿಯಲ್ಲಿ ಅಪ್ಪ ಸಿಕ್ಕಿದರೆ ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗುತ್ತೇನೆ ಎಂದು ಹೊರಟ. ದಾರಿಯಲ್ಲೆಲ್ಲೂ ರಾಯರ ಸುಳಿವಿರಲಿಲ್ಲ. ಪಾರ್ಕಿನ ಬಳಿ ಬಂದು ಗಾಡಿ ನಿಲ್ಲಿಸಿ ಒಳಗೆ ಕಾಲಿಟ್ಟ.
ರಾಯರೇ ನೀವು ಆಕಡೆ ಹೋಗುವ ಹಾಗಿಲ್ಲ. ನಿಮ್ಮ ದಾರಿ ಈ ಕಡೆ ಇದೆ ಬನ್ನಿ ನಿಮ್ಮನ್ನು ನಾವು ಕರೆದೊಯ್ಯುತ್ತೇವೆ ಎಂದರು ಆ ಘಟಾನುಘಟಿಗಳು. ರಾಯರು ಅದಕ್ಕೆ ಯಾರಪ್ಪ ನೀವಿಬ್ಬರು ನನ್ನನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೀರಾ ಎಂದರು. ಅದಕ್ಕೆ ಆ ಇಬ್ಬರು ರಾಯರೇ ಇನ್ನು ನಿಮಗೆ ಮನೆಯೂ ಇಲ್ಲ, ಮಡದಿಯೂ ಇಲ್ಲ ಎಂದು ಸುಮ್ಮನೆ ನಮ್ಮ ಜೊತೆ ಬನ್ನಿ ಎಂದರು.
ಪಾರ್ಕಿನ ಒಳಗೆ ಕಾಲಿಟ್ಟ ಪ್ರಸಾದ್ ಗೆ ಅಲ್ಲೊಂದು ಕಲ್ಲು ಬೆಂಚಿನ ಸುತ್ತ ಜನ ತುಂಬಿರುವುದು ಕಂಡಿತು. ಹತ್ತಿರ ಹೋದರೆ ಕಲ್ಲು ಬೆಂಚಿನ ಮೇಲೆ ರಾಯರು ಮಲಗಿದ್ದಾರೆ. ಪಕ್ಕದಲ್ಲಿದ್ದವರನ್ನು ಏನಾಯಿತು ಎಂದು ಕೇಳಿದಾಗ. ಪಾಪ ಯಾರೋ ವಯಸ್ಸಾದವರು ಕುಳಿತಲ್ಲೇ ಹೋಗಿಬಿಟ್ಟಿದ್ದಾರೆ ಎಂದರು.....
ಮೊನ್ನೆ ವಾಕ್ಪಥದಲ್ಲಿ ರಘು.ಎಸ್.ಪಿ ಅವರು ವಾಚಿಸಿದ ಜೋಗಿ ಅವರ "ಕನ್ನಡಿಯೊಳಗೆ ಗಳಗನಾಥರಿರಲಿಲ್ಲ" ಕಥೆಯಿ೦ದ ಪ್ರೇರಿತನಾಗಿ ಬರೆದ ಕಥೆ ಇದು.
ಪ್ರತಿಕ್ರಿಯೆ (6)