ಕನಸು ಕಂಡ ಕಣ್ಣುಗಳ ಆಕಾಶದಿ ಎಸೆದು ಬಂದೆ ನೀನಿಲ್ಲದೆ
ಹುಣ್ಣಿಮೆ ಚಂದ್ರನ ಕಂಡು ಹುಣ್ಣೆಂದು ನೊಂದೆ ನೀನಿಲ್ಲದೆ
ಕಣ್ಕೋರೈಸುವ ಕಾಮನಬಿಲ್ಲು ಕಂಡು ಕಣ್ ಕೊರೆಯುತಿದೆಯಂದೆ
ಆಕಾಶಕೇರಿದ ಗಾಳಿಪಟವ ಅಕ್ಷಿಯ ಹನಿಯಿಂದ ನೆನಸಿ ನಿಂದೆ
ಮುಸುಕಲ್ಲಿ ಮಿಸುಕಾಡಿದ ಮಾತುಗಳ ಉಸುಕಲ್ಲಿ ಹೂತು ಬಂದೆ
ಮನದಿ ಮಿಡಿದ ಮೌನಗಳ ಎದೆಯಗ್ನಿಕುಂಡದಲ್ಲಿ ಸುಟ್ಟು ನಿಂದೆ ನೀನಿಲ್ಲದೆ
ಬಯಸಿದ ಮನವದು ಭಯಾನಕ ಅಮವಾಸ್ಯೆಯಾಗಿದೆ
ಬದುಕಲಿ ಬರಡಾಗಿ ಬಿರಿದು ಬಾಯ್ದೆರೆದು ನಿಂದೆ ನೀನಿಲ್ಲದೆ
ದಿನವದು ದಣಿವರೆಯದ ದಟ್ಟಾರಣ್ಯದ ನಡಿಗೆಯಾಗಿದೆ
ನಡೆ ನುಡಿಯದು ಒಂದಾಗಿ ಅಂದಿದೆ ಈ ಜೀವ ನಿಂದೆ ನೀನಿಲ್ಲದೆ
ಪ್ರಕಾಶ.ಬಿ.ಜಾಲಹಳಿ
ಪ್ರತಿಕ್ರಿಯೆ (2)