ಅಜ್ಜ ಅಜ್ಜಿ ಮನೆಯಲಿಬ್ಬರೇ

ಸವಲತ್ತುಗಳಿವೆ ಇನ್ನಷ್ಟು

ಬೇಕಾದಷ್ಟಿದೆ ದುಡ್ಡು

ಕಳಿಸುತ್ತಾನೆ ಮಗ ಎಕೌಂಟಿಗಿಷ್ಟಿಷ್ಟು

ಇದ್ದರಾಯಿತು ಮಾತ್ರೆಗಷ್ಟೆ

ಅಂದು..

 

ಮಾತಾಡದೆ ಓದಿಕೊಳ್ಳಿ

ದೊಡ್ಡ ನೌಕರಿ ಕಾದಿಹುದು ನಿಮಗೆಂದೆ

ಇಂದು..

 

ನೆಲೆಕಂಡಿಹರು ದೂರದಲ್ಲೆಲ್ಲೊ

ಕಾತರಿಸಿವೆ ಕಿವಿಗಳು

ಒಲುಮೆಯ ಮಾತಿಗೆ

ಕಣ್ಣುಗಳು ಪ್ರೀತಿಯ ನೋಟಕೆ

ಹೆಪ್ಪುಗಟ್ಟಿದೆ ಭಾವಗಳು

ನಿಟ್ಟುಸಿರೆ ಉಸಿರಾಗಿದೆ

ಹೇಳಬೇಕೆಂದಿದ್ದ ಕಥೆಗಳೆಲ್ಲ ಮರೆಯತೊಡಗಿವೆ

ಮರೆಯಾಗಿದೆ ಮೊಮ್ಮಕ್ಕಳ ಕಲರವ

ಭಣಗುಟ್ಟುತಿದೆ ಮನೆ

ಭಾರವಾಗಿದೆ ಮನ

ದಿನಗಳು ಉರುಳುತಿವೆ

ಉರುಳಾಗುತಿದೆ ಜೀವನ