ವಸಂತಾಗಮನ
----------------
ಕಾನನ, ಗಿರಿ, ಬಯಲಿನಲ್ಲಿ,
ಮನೆಯ ಹೂದೋಟಗಳಲಿ, ,
ಅಖಿಲ ವೃಕ್ಷ ಮೂರ್ತಿಗಳಿಗೆ,
ಹಸಿರಾಭಿಷೇಕ ಸಲ್ಲಿದೆ.
ವಸಂತ ಪೂಜೆ ನಡೆಸಿದೆ.
ತರುಪ್ರಪಂಚ ರಂಗದಲ್ಲಿ,
ಋತುಲೀಲೆಯ ತಾಳದಲ್ಲಿ,
ಪವನ ಸಖನ ಮೇಳದಲ್ಲಿ,
ರಮ್ಯ ನೃತ್ಯ ಜರುಗಿದೆ.
ವಸಂತ ನಾಟ್ಯವಾಡಿದೆ.
ಕೆಂದರಳಿನ ಕೆಂಪು ನಲಿದು,
ಹಸಿರೆದೆಯಲಿ ಕಾಂತಿ ಹೊಳೆದು,
ವಿವಿಧ ಪುಷ್ಪ ವರ್ಣ ಸಿಂಧು,
ಪ್ರಕೃತಿ ಚಿತ್ರವರಳಿಸಿದೆ.
ವಸಂತ ಕುಂಛ ಬರೆದಿದೆ.
ಹೇಮವರ್ಣ ಪರ್ಣವುದುರಿ,
ನವ ಋತುವಿನ ಘೋಷ ಸಾರಿ,
ತರುನಾರಿಯ ಪ್ರಸವ ಮೀರಿ,
ನವ ಪಲ್ಲವ ಜನಿಸಿದೆ.
ವಸಂತ ಲಾಲಿ ಹಾಡಿದೆ.
ವಿರಹ ಹೃದಯ ತೀರದಲ್ಲಿ,
ಚಂಚಲ ಮನ ಕ್ಷಿತಿಜದಲ್ಲಿ,
ಅನುರಾಗದ ಘಟ್ಟಗಳಲಿ,
ಹಸುರೋದಯ ಬೆಳಗಿದೆ.
ವಸಂತ ರಾಗ ಮೂಡಿದೆ.
ವಿಹಗ ವೃಂದ ಕೂಜನ,
ತರಗೆಲೆಗಳ ನಿಸ್ವನ,
ಮೃದು ಪವನ ವೀಜನ,
ಶೃತ ಮನ ರೋಮಾಂಚನ,
ನವವಸಂತಾಗಮನ.
- ಚಂದ್ರಹಾಸ ( ೨೦ - ಮಾರ್ಚ್ - ೨೦೧೨)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!