ಶಂಕರನಾಗ್ - ಒಂದು ನೆನಪು
- ಲಕ್ಷ್ಮೀಕಾಂತ ಇಟ್ನಾಳ
ಅದು 1990 ರ ದಸರೆಯ ದಿನಗಳು. ದೂರದರ್ಶನ ಮಾತ್ರ ಪ್ರಚಲಿತವಿದ್ದ ದಿನಗಳವು. ಲೋಕಾಪೂರದಲ್ಲಿದ್ದ ನೀರಾವರಿ ಕಚೇರಿಯಲ್ಲಿ ನನಗೆ ಕೆಲಸ. ದಸರೆಯ ರಜೆಯ ದಿನಗಳಲ್ಲಿ ಲೋಕಾಪೂರದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಾಗ ಹಿಂದಿನಿಂದ ಯಾರೋ ಅದೂ ಇದೂ ಮಾತಾಡುತ್ತ ನಾಳೆ ಅಂದರೆ ಸಪ್ಟಂಬರ 30 ರಂದು ಲೋಕಾಪೂರಕ್ಕೆ ಶಂಕರನಾಗ ಬರುವ ಸುದ್ದಿ ಮಾತನಾಡುತ್ತಿದ್ದರು. ಅರೆ! ಕಿವಿಗಳನ್ನೇ ನಂಬದಾದೆ. ಎಂಥ ಅವಕಾಶವೊಂದನ್ನು ಕಳೆದುಕೊಳ್ಳುತ್ತಿದ್ದೆ ಎಂದುಕೊಂಡೆ. ಏಕೆಂದರೆ ಮರುದಿನ ರವಿವಾರ ನಾನು ದಸರೆಯ ಹಬ್ಬಕ್ಕೆ ತವರಿಗೆ ಹೋಗಿದ್ದ ಬಾಳಗೆಳತಿಯನ್ನು ಕರೆತರಲು ಹೂವಿನ ಹಡಗಲಿಗೆ ಹೋಗುವವನಿದ್ದೆ. ನಾನು ಶಂಕರನಾಗ್ ಅಭಿಮಾನಿ. ವಿಷಯ ನನಗೇ ಗೊತ್ತಿಲ್ಲವಲ್ಲ! ಎಂದುಕೊಂಡು ಅವರನ್ನು ನಾನೇ ಮಾತಿಗೆ ಎಳೆದು ‘ಎಲ್ಲಿ, ಯಾವ ಜಾಗಕ್ಕೆ ಬರುತ್ತಾರೆ’ ಎಂದೆಲ್ಲ ತಿಳಿದುಕೊಂಡೆ. ಅಲ್ಲಿ “ಜೋಕುಮಾರಸ್ವಾಮಿ” ಶೂಟಿಂಗ್ ಗಾಗಿ ಕೆಲವೊಂದು ಸ್ಥಳಗಳನ್ನು ನೋಡಿದ್ದಾರೆ ಎಂಬುದು ತಿಳಿಯಿತು. ದೇಸಾಯಿಯವರ ವಾಡೆ, ಮುಧೋಳ ತಾಲೂಕಿನ ಇನ್ನೂ ಕೆಲವು ಆಯ್ದ ಸ್ಥಳಗಳಲ್ಲಿ ಶೂಟಿಂಗ್ ಆಗಲಿದೆ ಎಂಬುದನ್ನೂ ಅವರು ತಿಳಿಸಿದರು. ಶಂಕರ್ ನಾಗ್ ಅಭಿಮಾನಿಯಾದ ನನಗೂ ಶಂಕರನಾಗ್ ಅವರನ್ನು ನೋಡುವ ಆಶೆ. ಅವರನ್ನು ಮಾತನಾಡಿಸುವ ಸಾಧ್ಯತೆಯ ಬಯಕೆ ಚಿಗುರೊಡೆದು, ಹಾತೊರೆಯತೊಡಗಿತು ಮನಸು. ಅವರು ಕಂಡ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಕನಸುಗಳು, ಹಾಗೂ ಕರ್ನಾಟಕದ ಬಗ್ಗೆ ಕಟ್ಟಿಕೊಂಡ ಅಭಿವೃದ್ಧಿ ಯೋಜನೆಗಳನ್ನು ಪತ್ರಿಕೆಗಳಲ್ಲಿ ಬಂದ ಅವರ ಸಂದರ್ಶನಗಳಲ್ಲಿ ಓದಿದ್ದೆ. ಗಿರೀಶ ಕಾರ್ನಾಡರ, ‘ಒಂದಾನೊಂದು ಕಾಲದಲ್ಲಿ’ಯ ಗಂಡುಗಲಿ, ಮಿಂಚಿನ ಓಟ. ಎಕ್ಷಿಡೆಂಟ್, ಸಾಂಗ್ಲಿಯಾನಾ, ಸಿಬಿಐ ಶಂಕರ, ನೋಡಿ ಸ್ವಾಮಿ ನಾವಿರೋದು ಹೀಗೆ, ಒಂದು ಮುತ್ತಿನ ಕಥೆ, ಆಟೋರಾಜ, ಸಾಂಗ್ಲಿಯಾನಾ ಹಾಗೂ ‘ನಾಗಮಂಡಲ’ವನ್ನು ಸ್ಟೇಜ್ ಗೆ ಅಳವಡಿಸಿದ್ದು, ಮನೆ ಮನೆ ಮಾತಾಗಿದ್ದ ‘ಸ್ವಾಮಿ’ ಧಾರಾವಾಹಿಯ ಮೂಲಕ ದೇಶಧ ಉದ್ದಗಲಕ್ಕೂ ಪರಿಚಿತರಾಗಿದ್ದ ಅಂತಹ ಮಹಾನ್ ನಟನನ್ನು ನೋಡುವ ಸುದೈವ ಮನೆಬಾಗಿಲಿಗೇ ಬಂದಿತ್ತು. ಅವರನ್ನು ನೋಡಲೇ ಬೇಕೆಂದು ನಿರ್ಧರಿಸಿದೆ. ರವಿವಾರದ ದಿನ ಶೂಟಿಂಗ್ ನೋಡಲು ಮುಗಿಬಿದ್ದ ಜನಸಾಗರದಲ್ಲಿ ಅವರನ್ನು ನೋಡುವುದಾಗಲಿ, ಮಾತನಾಡಿಸುವುದಾಗಲಿ, ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದಾಗಲಿ ಸಾಧ್ಯವಾಗದೇ ಹೋದರೆ, ಅದಕ್ಕೇ ಇನ್ನೊಂದು ದಿನ ಇರಲಿ ಎಂದು ಸೋಮವಾರವೂ ಕಚೇರಿಗೆ ರಜೆ ಹಾಕಿ ಬರೋಣ ಎಂದು ಮತ್ತೆ ಆಫೀಸ್ ಕಡೆಗೆ ಹೋಗಿ ರಜೆ ಚೀಟಿ ಬರೆದಿಟ್ಟೆ.
ಮನೆಗೆ ಬಂದವನೇ ಮೊದಲು ನನ್ನ ಹತ್ತಿರವಿದ್ದ ಅದಾಗಲೇ ಕೊಂಡ ಕ್ಯಾಮರಾವನ್ನು ಪರಿಶೀಲಿಸಿ ಅದಕ್ಕೆ ಕೋಡಕ್ ರೋಲ್ (ಗೋಲ್ಡ್), ಬ್ಯಾಟರಿ ಸೆಲ್ ಗಳನ್ನು ಹಾಕಿಸಿಕೊಂಡು ಬಂದೆ. ಅವರ ಆಟೋಗ್ರಾಫ್ ಯಾವುದರಲ್ಲಿ ತೆಗೆದುಕೊಳ್ಳುವುದು? ನನ್ನಲ್ಲಿ ಆಟೋಗ್ರಾಫ್ ಬುಕ್ ಇಲ್ಲ. ಹಾಗೆಯೇ ಕಾಗದದ ಮೇಲೆ ಆಟೋಗ್ರಾಫ್ ತೆಗೆದುಕೊಳ್ಳುವುದೇ! ಅದಕ್ಕಾಗಿಯೇ ಒಂದು ಸಣ್ಣ ಆಟೋಗ್ರಾಫ್ ಬುಕ್ ಕೊಂಡೆ.
ರಾತ್ರಿ ಊಟ ಮಾಡಿ ಅವರೊಡನೆ ಮಾತನಾಡಲು ಅವಕಾಶ ಸಿಕ್ಕರೆ ಅವರೊಂದಿಗೆ ಏನು ಮಾತನಾಡುವುದು, ಏನು ಪ್ರಶ್ನೆ ಕೇಳುವುದು? ನೋಟ್ ಮಾಡಿಕೊಂಡು ಬಿಡೋಣ ಅನ್ನಿಸಿ ಎದ್ದು ಮತ್ತೆ ಅವರ ಮುಂದಿನ ಯೋಜನೆಗಳು, ಈಗ ಚಿತ್ರಿತವಾಗುತ್ತಿರುವ 'ಜೋಕುಮಾರಸ್ವಾಮಿ ಎಷ್ಟು ದಿನದಲ್ಲಿ ಮುಗಿಯುತ್ತೆ, ಅವರ ಕನಸುಗಳ, ಯೋಜನೆಗಳ ಬಗ್ಗೆ ಸಂದರ್ಶನದಲ್ಲಿ ಓದಿದ್ದನ್ನು ಹೇಳಿ, ಅವುಗಳ ಬಗ್ಗೆ ಇನ್ನಷ್ಟು ವಿವರಿಸಲು ಹೇಳಬೇಕೆನಿಸಿತು. ಅವರಿಗೆ ಏನಾದರೂ ತಿನಿಸು ಮನೆಯಿಂದ ಮಾಡಿಸಿಕೊಂಡು ಹೋದರೆ ಹೇಗೆ? ಕೊಡಲು ಸಾಧ್ಯವಾಗಬಹುದೇ ಎಂದೆಲ್ಲ ಯೋಚಿಸಿ, ಈಗ ಅದಕ್ಕೆಲ್ಲ ಟೈಮ್ ಸಾಕಾಗೋಲ್ಲ ಎಂದು ಅದನ್ನು ಡ್ರಾಪ್ ಮಾಡಿದೆ. ಅವರ ಸಂಕೇತ್ ಸ್ಟುಡಿಯೋ ಬಗ್ಗೆ, ಅವರ ಸ್ಟೇಜ್ ಚಟುವಟಿಕೆಗಳ ಬಗ್ಗೆ ಚರ್ಚಿಸುವ ವಿಷಯಗಳ ದೊಡ್ಡದೊಂದು ಪಟ್ಟಿ ಮಾಡಿಟ್ಟುಕೊಂಡೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಯ ಹಾಗೆ ಪದೇ ಪದೇ ಅವುಗಳ ಮೇಲೆ ಕಣ್ಣಾಡಿಸಿದೆ. ಕರ್ನಾಟಕಕ್ಕೆ ಪಾದಾರ್ಪಣ ಮಾಡುವುದಕ್ಕಿಂತ ಮೊದಲು ಈ ಬ್ರದರ್ ಜೋಡಿ ಮುಂಬಯಿ ಮರಾಠಿ ಸ್ಟೇಜ್ ಮೇಲೆ ಮಿಂಚಿದ್ದು ಗೊತ್ತಿತ್ತು.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಮೀಪದ ರಾಮದುರ್ಗದಲ್ಲಿ ಮನೆ ಮಾಡಿ ಓಡಾಡುತ್ತಿದ್ದೆ. ಮರುದಿನ ಬೆಳಿಗ್ಗೆ ಬೇಗ ಎದ್ದು ಲಗುಬಗೆಯಿಂದ ತಯಾರಾಗಿ ಹಿಂದಿನ ದಿನ ತಯಾರಿಸಿಕೊಂಡ ನನ್ನ ಪ್ರಯಾಣದ ಸಲಕರಣೆಗಳೊಂದಿಗೆ ಲೋಕಾಪೂರಕ್ಕೆ ಹೋಗಲು ಬಸ್ ನಿಲ್ದಾಣದ ಕಡೆಗೆ ಹೊರಟೆ. ಅಂದು ಅದೇಕೋ, ನನಗೆ ಏನೋ ದುಗುಡ. ಏಕೆಂದರೆ ಇಂಥ ಚಟುವಟಿಕೆಯೆಲ್ಲ ನನಗೆ ಹೊಸದು. ಎಲ್ಲಾದರು ಎಡವಟ್ಟಾದರೆ ಹೇಗೆ? ಎಂದೆಲ್ಲ ಯೋಚಿಸಿ, ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ, ಒಂದು ಬಸ್ ಆಗಲೇ ನಿಲ್ದಾಣ ದಾಟಿ ಹೊರಟಿತ್ತು. ಓಡಿಹೋಗಿ ಹತ್ತಿ ಕುಳಿತೆ. ಅಲ್ಲಿಂದ ಅರ್ಧ ಗಂಟೆ ಪ್ರಯಾಣ. ಲೋಕಾಪೂರಕ್ಕೆ ಮುಟ್ಟಿದಾಗ ಇನ್ನೂ ಬಹಳ ಟೈಮ್ ಇದ್ದಿದ್ದರಿಂದ ಅಫೀಸ್ ಕಡೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು, ನಮ್ಮ ಕಚೇರಿಯ ಯಾರನ್ನಾದರೂ ಜೊತೆಗಾರನಾಗಿ ಮಾಡಿಕೊಂಡಲ್ಲಿ ಉತ್ತಮ ಎಂದು ಕಚೇರಿಗೆ ನಡೆದೆ. ವೋಬೈಲ್ ಗಿಬೈಲ್ ಏನೂ ಇರದ ಕಾಲವದು, ಸುಮಾರು ಹತ್ತು ಗಂಟೆಯಾಗಿರಬಹುದು, ನಮ್ಮ ಕಚೇರಿಯ ಜವಾನ್ ಬಂದ. ಖುಶಿಯಿಂದ ಅವನನ್ನು ಕರೆದುಕೊಂಡು ಶೂಟಿಂಗ್ ಸ್ಥಳಕ್ಕೆ ಹೋಗೋಣವೆಂದು ಅವನಿಗೆ ನನ್ನ ಯೋಜನೆಯ ವಿವರ ತಿಳಿಸಿದೆ. ತುಟಿಯಂಚಿನಲ್ಲಿ ವಿಷಾದದೊಂದಿಗೆ, ‘ಸರ್, ನಿಮಗ ಇನ್ನ ಗೊತ್ತಾಗಿಲ್ಲನ, ಶಂಕರನಾಗ್ ಬರಾಂಗಿಲ್ಲ ಅಂತಾ! ಆಗಲೇ ಜಗತ್ತಿಗೇ ಗೊತ್ತಾಗೆತಲ್ರೀ. ನೀವು ಊರಕಡೆ ಹೋಗೇ ಇಲ್ಲ. ಆಫೀಸ್ನ್ಯಾಗ ಕುಂತೀರಿ, ನಿಮಗೆ ಹ್ಯಾಂಗ ಗೊತ್ತಾಗ್ಬೇಕು’ ಅಂದು, “ ಶಂಕರ್ ನಾಗ್ ದಾವಣಗೇರಿ ಹತ್ತಿರ, ಆನಗೋಡ್ ಹತ್ತಿರ ರಾತ್ರಿ ಆಕ್ಷಿಡೆಂಟ್ನ್ಯಾಗ ಖಲಾಸ ಆಗ್ಯಾನರಿ, ಭಾಳ ದೊಡ್ಡ ದುರಂತರೀ ಸರ್” ಅಂದ.
ಸ್ವಲ್ಪ ತುಂಟಾಟದ ಸ್ವಭಾವದ ಅವನತ್ತ, “ಹೇ ಹುಚ್ಚಾ! ದೊಡ್ಡವರ ಬಗ್ಗೆ ಹಾಗೆಲ್ಲ ಚಾಷ್ಟಿ ಮಾಡಬಾರದೋ, ಎಲ್ಲದಕ್ಕೂ ಒಂದು ಮಿತಿ ಇರ್ತೈತಿ ಏನಪಾ! ಒಳತು ಅನ್ನು” ಎಂದೆ!
ಅದಕ್ಕೆ ಅವನು, “ಸರ್ ಸುದ್ದಿ ಸುಳ್ಳ ಆದರ ನಾನ ವೊದಲ ಲೋಕೇಶ್ವರನಿಗೆ ಕಾಯಿ ಒಡಸ್ತೇನ್ರೀ. ಆದರ ಸುದ್ದಿ ಸುಳ್ಳಲ್ರೀ ಸರ್” ಎಂದು ಕಣ್ಣಲ್ಲಿ ನೀರು ತಂದು ಅಳಲಿಕ್ಕೆ ಶುರು ಮಾಡಿದ. ವಿಷಯದ ಗಂಭೀರತೆ ಅರಿತ ನನಗೆ ಜಂಘಾಬಲವೇ ಕುಸಿದಂತಾಯಿತು. ಇಬ್ಬರೂ ಗಲುಬಗೆಯಿಂದ ಊರ ಕಡೆಗೆ ಬಂದೆವು. ಕಾಳ್ಗಿಚ್ಚಿನಂತೆ ಹಬ್ಬಿದ ಸುದ್ದಿ ಎಲ್ಲರ ಬಾಯಲ್ಲಿ ವಿಷಾದದಿಂದ ಚರ್ಚೆಯಾಗುತ್ತಲಿತ್ತು. ಕೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿ, ಮೆಚ್ಚಿನ ನಟ ಇನ್ನಿಲ್ಲವೆಂಬುದನ್ನು ಮನಸ್ಸು ಒಪ್ಪದೇ ಒದ್ದಾಡಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ಶಂಕರನಾಗ್ಗೊಂದು ಸೆಲ್ಯೂಟ್ ಹೇಳಿ ಅವರ ಆತ್ಮಕ್ಕೆ ಶಾಂತಿ ಕೋರಿದೆ. ಕರ್ನಾಟಕ ಕಂಡ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು, ನಾಡು ಬಡವಾಗಿತ್ತು. ನನ್ನ ಉದುರಿದ ಕನಸುಗಳೊಂದಿಗೆ, ಭಾರವಾದ ಹೃದಯದೊಂದಿಗೆ, ಮೆಚ್ಚಿನ ನಟನ ಅಗಲಿಕೆಯ ನೋವಿನೊಂದಿಗೆ ಊರ ಕಡೆಗೆ ಬಸ್ ಹತ್ತಿದೆ. ಆಟೋಗ್ರಾಫ್ ಬುಕ್, ಕ್ಯಾಮರಾ ತಣ್ಣಗೆ ಬ್ಯಾಗಿನಲ್ಲಿ ಕುಳಿತಿದ್ದವು. ಹಾಗೂ ನನ್ನೊಳಗೆ ನನ್ನ ಪ್ರಶ್ನೆಗಳು!
ಮೊನ್ನೆ ಗೆಳೆಯರ ಜೊತೆ ಚರ್ಚಿಸುತ್ತಿರುವಾಗ ಕನ್ನಡ ಚಿತ್ರರಂಗದ ಬಗ್ಗೆ ಮಾತು ಹೊರಳಿ ಶಂಕರನಾಗ್ ಅವರ ಕುರಿತು ಗೆಳೆಯರೊಬ್ಬರು ಮಾತನಾಡುತ್ತ ಅವರನ್ನು ನೆನಪಿಸಿ, ‘ಶಂಕರನಾಗರ ಅಗಲಿಕೆಯಿಂದ ಆದ ಆ ಏನ್ ಗ್ಯಾಪ್ ಅದಲಾ, ಅದನ್ನ ಇನ್ನೂ ಯಾರಿಂದಲೂ ತುಂಬಲಿಕ್ಕೆ ಆಗಲಿಲ್ಲ ನೋಡ್ರಿ’ ಎಂದರು, ಹಾಗೆಯೇ ನನಗೂ ನನ್ನ ಪ್ರೀತಿಯ ಶಂಕರ್ ನೆನಪಾದರು. ಆ ನೆನಪನ್ನು ತಮ್ಮೊಂದಿಗೆ ಹಂಚಿಕೊಂಡೆ ಅಷ್ಟೆ. ಶಂಕರನಾಗ್ ಒಬ್ಬ ಅಮರ ಕಲಾವಿದ. ಅವರೊಳಗೊಬ್ಬ ಮನುಷ್ಯನಿದ್ದ!
‘ಕಾಡು ನೋಡಹೋದೆ, ಕವಿತೆಯೊಡನೆ ಬಂದೆ’ ಎಂದವನನ್ನು ಕೊನೆಗೂ ಕಾಡು ಕರೆದೇ ಬಿಟ್ಟಿತ್ತು!
ಅವರು ನಮ್ಮನ್ನಗಲಿ ಇಂದಿಗೆ ಇಪ್ಪತ್ತೆರಡು ವರ್ಷಗಳಾದವು! ಅವರು ಕಂಡ 'ಮೆಟ್ರೋ' ಕನಸು ಇಂದು ನನಸಾಗಿದೆ.ಇನ್ನೂ ಅವರು ಕನ್ನಡಿಗರ ಹೃದಯಗಳಲ್ಲಿ ನೆಚ್ಚಿನ ನಟರಾಗಿ ಯಾವತ್ತೂ ಹಚ್ಚ ಹಸಿರಾಗಿ ಉಳಿದಿದ್ದಾರೆ, ಉಳಿಯುತ್ತಾರೆ. ಶಂಕರನಾಗ್ ಚಿರಾಯು! ಕನ್ನಡ ತಾಯಿಯ ಈ ಕನ್ನಡಕುವರನಿಗೆ, 'ಗಂಡುಗಲಿ' ಯ ಆತ್ಮಕ್ಕೆ ಶಾಂತಿ ಕೋರುತ್ತ ಈ ದಿನ ವಿಶೇಷ ಸಲಾಂ ಹೇಳಲೇಬೇಕಲ್ಲವೆ?
(ಶಂಕರನಾಗ್ ಚಿತ್ರ ಕೃಪೆ: ಅಂತರ್ಜಾಲ )
ಪ್ರತಿಕ್ರಿಯೆ (4)