ಆತನೊಳಬರುವುದನು ತಡೆಯಲಿಲ್ಲ;
ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ;
ಕಟಪಟೆಯ ಸೆಡವು ಮಾತಾಡಲಿಲ್ಲ.
ಮೊದಲಿನಿಯನಾಗಿದ್ದುದನು ಗಣಿಸಲಿಲ್ಲ
ನೇರ ದಿಟ್ಟಿಯ ಕಣ್ಣ ನೋಟವಿಟ್ಟು
ಪರಕೀಯನೆಂಬಂತೆ ಕಂಡಳಲ್ಲ!
ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು ರೂಪ , ಒಂದು ಭಾಮಿನಿ ಷಟ್ಪದಿಯಲ್ಲಿ:
ತಡೆಯದವನೊಳ ಬರುವುದನು ಬೇ
ರೆಡೆಗೆ ತಿರುವದೆ ತನ್ನ ಮೊಗವನು
ಸೆಡವಿನಲಿ ಕಟಪಟೆಯ ನುಡಿಗಳನಾಡದೆಲೆಯವಳು
ನೆಡುತ ನೇರದ ದಿಟ್ಟಿಯವನಲಿ
ಪೆಡೆಯನಂತೆಯೆ ಕಾಣುತಿರುವಳು
ಗೊಡವೆಯಿಲ್ಲದೆ ಮೊದಲಿಗವ ತನ್ನಿನಿಯನೆಂಬುದನು
ಸಂಸ್ಕೃತ ಮೂಲ: (ಅಮರುಕವಿಯ ಅಮರು ಶತಕದಿಂದ)
ನಾಂತಃ ಪ್ರವೇಶಮರುಣದ್ವಿಮುಖೀ ನ ಚಾಸೀ-
ದಾಚಷ್ಟ ರೋಷಪರುಷಾಣಿ ನ ಚಾಕ್ಷರಾಣಿ |
ಸಾ ಕೇವಲಂ ಸರಲಪಕ್ಷ್ಮಭಿರಕ್ಷಿಪಾತೈಃ
ಕಾಂತಂ ವಿಲೋಕಿತವತೀ ಜನನಿರ್ವಿಶೇಷಮ್ ||
नान्तः प्रवेशमरुणाद्विमुखी न चासी-
दाचष्टरोष परुषाणि न चाक्षराणि ।
सा केवलं सरलपक्ष्मभिरक्षिपातैः
कान्तं विलोकितवती जननिर्विशेषं । ।
-ಹಂಸಾನಂದಿ
ಕೊ: ಪೆಡೆಯ = ಹೊಸಬ
ಕೊ.ಕೊ: ಈ ಪದ್ಯದ ಬಗ್ಗೆ ಮಾತಾಡುತ್ತಿದ್ದಾಗ ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರೊಡನೆ, ಈ ಪದ್ಯವನ್ನೂ ನನ್ನ ಅನುವಾದವನ್ನೂ ಹಂಚಿಕೊಂಡೆ. ಆಗ ಅವರು ಇದಕ್ಕೆ ಅಮರುವಿನ ಕವಿತೆಯ ನವಿರುತನವನ್ನು ಉಳಿಸಿಕೊಳ್ಳುವಂತಹ , ಅನುವಾದವೆಂದರೆ ಹೀಗಿರಬೇಕೆನ್ನಿಸುವಂತಹ ಒಂದು ಅತಿ ಸುಂದರ ಅನುವಾದವನ್ನು ಹೀಗೆ ಚೌಪದಿಯನ್ನು ಹೀಗೆ ಬರೆದಿದ್ದಾರೆ. ಅದನ್ನು ನೀವು ಓದಲೇಬೇಕು!
ನಲ್ಲನೊಳಬಂದನೆನೆ ಸಿಡುಕಿಲ್ಲ ಕೆಡುಕಿಲ್ಲ
ಹೊಲ್ಲಬೈಗಳವಿಲ್ಲ ಮೊಗದಿರುಹಲಿಲ್ಲ
ಎಲ್ಲವಂ ಬರಿಯ ನಿಡುಗಣ್ಣೋಟದೊಳ್ ತುಂಬಿ
ನಲ್ಲನನೀಕ್ಷಿಪಳು ಪರಕೀಯನಂತೆ
ಪ್ರತಿಕ್ರಿಯೆ (2)