(ನಾನು ಹಲವು ವರ್ಷಗಳಿಂದ ಬರೆದಿರುವ ಕೃಷ್ಣನ ಬಗ್ಗೆ ಕೆಲವು ಪದ್ಯಗಳು — ಇದರಲ್ಲಿ ಸ್ವಂತ ಪದ್ಯಗಳೂ, ಅನುವಾದಗಳೂ ಸೇರಿವೆ )

ಚಿತ್ರ: ಶ್ರೀ ಕೇಶವ್ ರಾಧಾಕೃಷ್ಣನ್ ಅವರದ್ದು
ಗೊಲ್ಲ ಪೆಣ್ಗಳ ಬಟ್ಟೆ ಕದ್ದಿಹ
ಕಳ್ಳನೆನಲೋ? ದುರುಳ ನಾಶಕ
ಮಲ್ಲನೆನಲೋ? ದುಗುಡ ಕಳೆಯುವ ಭಲ್ಲೆ ಇವನೆನಲೋ?
ಪುಲ್ಲಲೋಚನೆ ಸತ್ಯಭಾಮೆಯ
ನಲ್ಲನೆನಲೋ? ಕಿರುನಗೆಯ ಸುಲಿ
-ಪಲ್ಲ ಕಂದನು ಮುದ್ದಿಸಲು ಸಲ್ಲುವನು ಇವನೆನಲೋ?
ಅಂದದಲ್ಲಾರಿಹರೊ ನಿನಗರ
-ವಿಂದಲೋಚನ! ಗೋಕುಲದೊಳಗೆ
ಮಂದೆ ಗೋವ್ಗಳ ಕಾಯುತಲಿ ನೀನಂದು ಕೊಳಲಿಂದ
ಸುಂದರ ಸ್ವರಗಳನು ನುಡಿಸಿರೆ
ಹಂದರದಿ ಮಲ್ಲಿಗೆಯು ನಲಿದವು
ಮಂದಿರದ ಗಂಟೆಗಳು ಮಂಗಲನಾದ ಮಾಡಿದವೆ!
ಸೆರೆಮನೆಯೊಳಗೆ ಹುಟ್ಟಿದಾ ಶಿಶು
ಕರುಣೆಯಿರದಿಹ ದುರುಳ ಕಂಸನ
ನೆರಳಿನಲ್ಲೇ ಯಮುನೆ ನೆರೆಯನು ದಾಟಿ ಗೋಕುಲಕೆ
ತೆರಳಿ ಗೊಲ್ಲರ ಕೆಳೆಯಲಾಡುತ
ಮುರಳಿಯನು ಪಿಡಿದವನೆ ಜಗದೀ
ಸೆರೆಯ ಬಿಡಿಸಲಿ ನಮ್ಮನೆಲ್ಲರ ಕಾಯ್ದು ಚೆನ್ನಿಗನು!
ಮಡಕೆಯೊಡೆದಿಹನಮ್ಮ ಬೆಣ್ಣೆಯ
ಹುಡುಗನೀತನು ನೀನೆ ಬೇಗನೆ
ಕೊಡಲುಬೇಕೌ ತಕ್ಕ ಶಿಕ್ಷೆಯನೆನಲು ಗೋಪಿಯರು
ಒಡನೆ ತಬ್ಬುತ ತಾಯಿ ನುಡಿದಳು
ಬಿಡಿರೆ ಸಟೆಯನು ನಿಲುವನೇ ಕಾ-
ಪಿಡದೆ ತಪ್ಪೆಸಗದಿಹ ಕಂದನ ಹೀಗೆ ದೂರುವಿರಿ?
ಕನ್ನೈದಿಲೆಯ ನೀಲ ಕೋಮಲಾಂಗದ ಹರಿಯ
ಮುನ್ನ ಇಂದ್ರಾದಿಗಳ ಪೂಜೆವಡೆದ
ಚೆನ್ನಾಗಿ ಆಸರೆಯಲಿಹರನ್ನು ಕಾಯ್ವಂಥ
ಚಿನ್ನ ಕಂದನ ನಾನು ನೆನೆವೆ ಮನದಿ
ಚೆಲುವ ಕೃಷ್ಣನ ಕೊರಳ ತಬ್ಬಿಹೆ-
ನೆನುತ ಮಾಲೆಯೆ ಮೆರೆವೆಯಾ?
ಗೋಪಿಯರು ನಲ್ಲನನು ಬಿಗಿದ-
ಪ್ಪಿರಲು ಹೊಸಕದೆ ಉಳಿವೆಯಾ?
ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ
ಬಿದಿರಾಗಿ ಆ ಯಮುನೆ ದಡದ ಮೆಳೆಯಲ್ಲಿ
ಅಲ್ಲಿ ತಾನೇ ಧನ್ಯ ಕೊಳಲಾಗಿ ಪಡೆದುದದು
ಗೋಪಕುವರನ ರನ್ನದುಟಿಗೊತ್ತುವಾ ಹಿತವ
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ
ಮುರಳಿ ನಾದದ ಜೇನಸವಿ ತುಂಬಿ ಸುರಿಸಿ;
ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ-
ವರೆ ಮುಖವು ಮನದಲ್ಲಿ ನಿಲಲಿ ಸಡಗರಿಸಿ!
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ
ಎಣೆಯಿರದ ಕೌಸ್ತುಭವು ಅವನೆದೆಯಲಿ
ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ-
ಕಣದ ಕೈಯಲ್ಲಿ ಮೆರೆವ ಕೊಳಲು!
ನರುಗಂಪು ಬೀರುತಿರಲವನು ಪೂಸಿದ ಗಂಧ
ಕೊರಳಲೋಲಾಡಿ ಮೆರೆಯುತಿರೆ ಸರವು
ನೆರೆದ ಗೋಪಿಯರೆಲ್ಲ ನಡುವಿನಲಿ ಕಂಗೊಳಿಸು-
ತಿರುವನೈ ಗೊಲ್ಲನಿವ ರತುನದಂತೆ
ಮೊಗದಲ್ಲಿ ಹೊಸಬೆಣ್ಣೆ ಘಮಲು ತುಂಬಿಹನನ್ನು
ನುಡಿಯಲ್ಲಿ ಚತುರತೆಯ ಕಳ್ಳಮಾತಿಹನ
ಸುಳ್ಳು ಕಣ್ಣೀರನ್ನು ಸುರಿಸುವನ ನೆಚ್ಚುವೆನು
ಮೆಲ್ಲನೇ ಕಾಲ್ಬಡಿವ ಹಠದ ಬಾಲಕನ !
ಗೋವ ಕಾಯ್ದಸುರರನು ಕೊಂದು ಗಿರಿಯನ್ನೆತ್ತಿ
ಮಾವನನೆ ತರಿದು ನೀ ಮಥುರೆಯನು ತೊರೆದು
ದೇವ ಕೃಷ್ಣನೆ! ಗೀತೆಯನ್ನೊರೆದು ಧರ್ಮವನು
ಬುವಿಯಲ್ಲಿ ಕಾಯ್ದೆಯೇ! ನನ್ನೆತ್ತಿ ಕರೆದು!
ನರುಗಂಪು ಚಂದನವ ಪೂಸಿ ಮೈಯಲ್ಲೆಲ್ಲ
ಕೊರಳನ್ನು ಸೊಬಗಿಸಲು ಮುತ್ತಿನ ಸರ
ಧರಿಸಿ ಸುತ್ತುವರಿದಿಹ ಗೋಪಿಯರ ನಡುವಲ್ಲೆ
ಮೆರೆಯುತಿಹ ಗೊಲ್ಲನಿವ ತಾ ಗೆಲ್ವನು!
ಹಾಲಕಡಲಿನ ದೊರೆಯು ಇವನೆಂದು ಗೋಪಾಲ
ಬಾಲನಿವ ಹಾಲೂಡಿಸುವನೀತನೆನುತ
ಸಲೆ ನೆಚ್ಚೆ ಮತ್ತೊಮ್ಮೆ ಇರದಂತೆ ತಾಯಮೊಲೆ-
ಹಾಲು ನಮಗಿನ್ನೆಂದು ಮಾಡಿದನೆ ಈತ !
ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ
ಮುಖಕಮಲವರಳಿಸಿದ ಮುಗುದ ಬಾಲಕನು
ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ
ಚಿತ್ರವನು ಎನ್ನೆದೆಯಲಾರು ಬರೆದವರು?
ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು
ಮುಡಿಯಲೇರಿಹ ನವಿಲ ಗರಿಯ ಮೆರುಗು
ಸೆಳೆವ ನೀಲಕೆ ಸಿಗ್ಗು ತಂದವನ ಮೈಬಣ್ಣ
ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!
ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು
ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ
ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ
ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು
ಮಾಗಿಕಾಲದ ಸಂಜೆಯಲಿ ಗೋಕುಲದ ಯಮುನೆಯ ತಟದಲಿ
ತೂಗುಗಂಟೆಯ ದನಿಯ ಕಿಂಕಿಣಿ ಸಂಜೆಹಾದಿಯ ತುಂಬಿರೆ
ಸಾಗಿಬರುತಿಹ ಗೊಲ್ಲಬಾಲರು ಮಂದೆ ಹಸುಗಳ ಮುಂದೆಯೆ
ಕೂಗಿ ಹಾಕಿಹ ಕೇಕೆ ಕೊಳಲಿನ ದನಿಯೆ ನಮ್ಮನು ಕಾಯಲಿ!
ಯಮುನೆ ಮರಳಿನ ದಡದ ಹೊಂಗೆಯ ನಿಬಿಡ ನೆರಳಲಿ ಕುಳಿತು ತಾ
ಎಡದ ಕೈಯಲ್ಲಿರಿಸಿ ಸವಿಗೊಳಲನ್ನು ಸೊಂಟದಿ ಕೊಂಬನು
ಹರಿವ ನದಿ ಕಮಲದೆಲೆ ದೊನ್ನೆಯ ಮೊಸರಿನನ್ನವ ಮೆಲ್ಲುತಾ
ಸುತ್ತಲಿಹ ಹಸುಗಳನು ಬಿಡದೆಯೆ ನೋಡಿಕೊಂಬನ ಕಂಡೆನೇ !
ಕಿರುನಗುವ ಆ ಕೃಷ್ಣನಾ ಮುಖಕಮಲದಲ್ಲಿ ಹೊಮ್ಮುವುಸಿರಿನ ಸವಿಯನು
ಅರಿತಿರುವೆ ನೀ ಕೊಳಲೆ! ನಿನ್ನ ನಾ ಬೇಡುತಿಹೆ ಇಂದು ಕೇಳೆನ್ನ ಮೊರೆಯ
ಆ ರನ್ನದುಟಿಗಳಾ ಬಳಿ ನೀನು ಹೋಗಿರುವ ಸಮಯದಲಿ ನನ್ನ ದೆಸೆಯ
ಸರಿಯಾಗಿ ನಂದಕಂದನ ಕಿವಿಗೆ ಗುಟ್ಟಿನಲಿ ಮೆಲ್ಲನೇ ಒಮ್ಮೆ ನುಡಿಯೇ!
ರಾಮ ಅಂತೊಬ್ಬಿದ್ದ; ಹುಂ; ಅವನ ಹೆಂಡತಿಯ ಹೆಸರು ಸೀತೇ ಅಂತ;ಹುಂ;
ತಂದೆ ಮಾತಿಗೆ ಪಂಚವಟಿಯ ದಡದಲ್ಲಿರಲು ರಾವಣನವಳ ಕದ್ದನು;
ನಿದ್ದೆ ಮಾಡಿಸಲಮ್ಮ ಕಥೆ ಹೇಳುತಿರಲು ಹುಂಗುಟ್ಟುತಿಹ ಹರಿಯು ಒಡನೇ
ಲಕ್ಷಣಾ ಬಿಲ್ಲು ಬಿಲ್ಲೆಲ್ಲೆಂದು ಕಳವಳಿಪ ಮಾತೆ ನಮ್ಮನು ಕಾಯಲಿ
-ಹಂಸಾನಂದಿ
~*~*~*~*~*~*~*~*~*~*~*~*~*~*~*~*~*~*~*~*~*~*~*~*~*~*~*~*
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!