ಸಂಸ್ಕೃತವು "ಕಟ್ಟಿದ" - "ಕೃತಕ" - ಭಾಷೆ,ಅದಕ್ಕೆ ಇರುವ ವ್ಯಾಕರಣ ನಿಯಮಗಳೇ ಸಾಕ್ಷಿ. ಪ್ರಾಕೃತಗಳನ್ನು ಸೋಸಿ ಸಂಸ್ಜೃತ ಮಾಡಲಾಗಿ ವ್ಯಾಕರಣ ನಿಯಮಗಳನ್ನ ಹೇರಲಾಯಿತು ಅನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಹರಡಿದೆ. ಹಾಗೆಂದರೆ ಪ್ರಾಕೃತ ಭಾಷೆಗಳಿಗೆ - ಅಥವಾ ಅದನ್ನೇ ಇನ್ನೂ ವಿಸ್ತರಿಸಿ ನೋಡಿದರೆ ಕನ್ನಡ, ತುಳು, ಕೊಡವ ಇಂಥ ಭಾಷೆಗಳಿಗೆ ವ್ಯಾಕರಣ ನಿಯಮಗಳಿಲ್ಲವೇ? ಇದ್ದೇ ಇದೆ. ಎಲ್ಲ ಭಾಷೆಗಳಿಗೂ ಅವುಗಳವುಗಳ ನಿಗದಿತ ಚೌಕಟ್ಟು ಇದ್ದೇ ಇರುತ್ತೆ. ಅದನ್ನೇ ವ್ಯಾಕರಣ ಅನ್ನುತ್ತೇವೆ ಅಷ್ಟೇ!
ಸಂಸ್ಕೃತ ಜನಸಾಮಾನ್ಯರು ಮಾತಾಡುವ ಸಮಯದಲ್ಲೇ ಪ್ರಾಕೃತ ಗಳನ್ನೂ ಮಾತಾಡುತ್ತಿದ್ದರು ಎನ್ನುವುದು ಸತ್ಯವೇ. ಅದು ಹೇಗೆ ಎಂಬ ಪ್ರಶ್ನೆ ಬಂದರೆ ಅವೆಲ್ಲ ಉಪಭಾಷೆಗಳು, ಹಾಗೂ ಒಬ್ಬ ವ್ಯವಹಾರ ಮಾತಾಡುತ್ತಿದ್ದ ಉಪಭಾಷೆ ಯಾವುದಾಗಿದ್ದರೂ, ಸಂಸ್ಕೃತ ಮತ್ತು ಉಳಿದ ಉಪಭಾಷೆಗಳು ಅರ್ಥ ವಾಗುತ್ತಿದ್ದವು ಎಂದೇ ತಿಳಿಯಬೇಕಾಗುತ್ತೆ. ಸಂಸ್ಕೃತನಾಟಕಗಳೇ ಇದಕ್ಕೆ ಸಾಕ್ಷಿ. ಇವುಗಳಲ್ಲಿ ಸುಮಾರು ೫೦-೬೦% ಭಾಗ ಪ್ರಾಕೃತಗಳಲ್ಲೇ ಇರುತ್ತವೆ. ಅಂದರೆ ಕಾಳಿದಾಸ ಒಬ್ಬ ಸಂಸ್ಕೃತಕವಿಯಷ್ಟೇ ಅಲ್ಲ, ಅವನು ಪ್ರಾಕೃತ ಕವಿ ಕೂಡ!
ಸರಳವಾದ, ಒಂದು ಉದಾಹರಣೆಗೆ :
ನಾ ಹೋಗ್ತೀನಿ
ನಾನು ಹೋಗ್ತೀನಿ
ನಾನು ಓಯ್ತೀನಿ
ನಾನೋಯ್ತೀನಿ
ನಾವೋಯ್ತೀವಿ
ನಾನು ಹೋಗುತ್ತೇನೆ
ನಾನೋಗ್ತೀನಿ
ನಾ ಓಗ್ತೀನಿ
ನಾವೋಗ್ತೀವಿ
ನಾನೋಗ್ತೀನಿ
ನಾನ್ಹೋಗ್ತೀನಿ
ಇಷ್ಟು ಸಾಲುಗಳು ಸಾಮಾನ್ಯವಾಗಿ ಕರ್ನಾಟಕದಲ್ಲಿರುವ ಯಾವ ಕನ್ನಡಿಗನಿಗೂ ಒಂದೇ ಅರ್ಥವೆಂದು ತಿಳಿಯುತ್ತದೆ. ಅಲ್ಲವೆ? ಇದರಲ್ಲಿ, "ನಾನು ಹೋಗುತ್ತೇನೆ " ಎನ್ನುವುದನ್ನು ಸಂಸ್ಕೃತ ಕ್ಕೆ ಸಮಾಂತರವಾಗಿ ಇಟ್ಟು ಕೊಂಡರೆ, ಉಳಿದ ರೂಪಗಳನ್ನು ಶೌರಸೇನೀ ಮಹಾರಾಷ್ಟ್ರೀ ಮಾಗಧೀ ಮೊದಲಾದ ಪ್ರಾಕೃತ ಗಳಿಗೆ ಸಮಾಂತರವಾಗಿ ಒಟ್ಟು ಕೊಳ್ಳಬಹುದು.
ಇನ್ನು ಸಂಸ್ಕೃತವೇ ಮಾತಾಡುವ ವಾತಾವರಣ ಇಲ್ಲದ ಕಡೆ, ಸಂಸ್ಕೃತ ಮಾತಾಡುವಂಥವರು ( ಕೇರಳದ ತುತ್ತತುದಿಯಲ್ಲಿ ಎಂದುಕೊಳ್ಳೋಣ) ಸಂಸ್ಕೃತ ಕಲಿತು ಮಾತಾಡುವಾಗ ಅವರು ಬಹುಶಃ ಯಾವುದು ಪಾಣಿನೀಯವೋ, ಗ್ರಂಥಸ್ಥವೋ ಅಂತಹವನ್ನೇ ಕಲಿತು ಬಳಸುತ್ತಿದ್ದರು ಎಂದು ಊಹೆ ಮಾಡಬಹುದು. ನನ್ನ ಮೇಲಿನ ಕನ್ನಡ ಉದಾಹರಣೆಯಲ್ಲಿ ಅದು "ನಾನು ಹೋಗುತ್ತೇನೆ" ಎಂಬುದಕ್ಕೆ ಸಮ. ಅಂತಹವರಿಗೆ, ನಾನೋಯ್ತೀನೀ ಅಥವಾ ನಾನೋಗ್ತೀನಿ ಎಂದರೆ ಗೊತ್ತಾಗದಿರಲಿಕ್ಕೂ ಸಾಕು. ಕೇವಲ ಪುಸ್ತಕದ ಕನ್ನಡವನ್ನೇ ಕಲಿತವರಿಗೆ , ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳ ಕನ್ನಡವು ಒಂದುವೇಳೆ ಸರಿಯಾಗಿ ಅರ್ಥವಾಗದೇ ಹೋಗದ ಹಾಗೆ. ಹಾಗಂತ, ಕನ್ನಡ ಒಂದು "ಕಟ್ಟಿದ" ಭಾಷೆ , ಅದರಲ್ಲಿ ಬೇಡವಾದ ವ್ಯಾಕರಣ ನಿಯಮಗಳಿವೆ - ಎನ್ನಲಾಗುತ್ತದೆಯೇ?
ಮಲಯಾಳ, ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ಇರುವಂತೆ ಕ್ರಿಯಾಪದಗಳಿಗೆ ಬೇರೆ ಬೇರೆ ಲಿಂಗಗಳಲ್ಲೂ ಒಂದೇ ಪದ ( He comes, She comes, അവൻ വരുന്നു (Avan varunnu) and അവൾ വരുന്നു (Aval varunnu), सः आगच्छति (Saḥ āgacchati), सा आगच्छति (Sā āgacchati) ಇರುವಂತೆ ಕನ್ನಡದಲ್ಲಿ ಇಲ್ಲದೇ ( ಅವನು ಬರುತ್ತಾನೆ, ಅವಳು ಬರುತ್ತಾಳೆ) ಇರುವುದರಿಂದ ಕನ್ನಡದಲ್ಲಿ "ಕಷ್ಟಕರವಾದ ವ್ಯಾಕರಣ ನಿಯಮಗಳನ್ನು ಇಟ್ಟಿದ್ದಾರೆ" ಎಂದು ಹೇಳಿದರೆ ಎಷ್ಟು ಸರಿ?
ನೀವೇ ಯೋಚಿಸಿ!
-ಹಂಸಾನಂದಿ
ಭಾಷೆ ಮೊದಲೋ ವ್ಯಾಕರಣ ಮೊದಲೋ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!