ನಿಮಗೆಲ್ಲಾ ಪ್ರಕಾಶ್ ಪಡುಕೋಣೆ ಪರಿಚಯ ಹೇಳಬೇಕಾಗಿಯೇ ಇಲ್ಲ. "ದೀಪಿಕಾ ಪಡುಕೋಣ್‌ಳ ಅಪ್ಪ ಅಂದದ್ದು ಯಾರದು..? ಸಪ್ತಗಿರಿವಾಸಿಯಾ...ಹೋಗಲಿ ಬಿಡಿ, ಈಗಿನ ಜನರೇಶನ್ ಹುಡುಗ ಅಲ್ವಾ..
ಪ್ರಕಾಶ್ ಪಡುಕೋಣೆ ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ಪ್ರಸಿದ್ಧರು. ನಾನೂ ಸಹ...ಶಟ್ಲ್ ಆಡಲು ಮನೆಯೆದುರಿಗಿನ ರಸ್ತೆಗಿಳಿದರೆ ಎದುರುಮನೆ "ವಿಶ್ವ" ಕಣ್ಣು ಎವೆಯಿಕ್ಕದೇ ಆಟ ನೋಡಲು "ಸಿದ್ಧ".
ನನ್ನ ಶಟ್ಲ್ ಕೋರ್ಟ್‌ನ ಬೌಂಡರಿ ಲೈನ್-ಎಡಕ್ಕೆ ವಿಶ್ವನ ಹೊಸ ಇನ್ನೋವಾ ಕಾರು, ಬಲಕ್ಕೆ ಸುಬ್ಬರಾಯರ ಸ್ವಿಫ್ಟ್ ಕಾರು, ಹಿಂದೆ ಕರಿಷ್ಮಾ ಬೈಕ್, ಮುಂದೆ ಯಮಹಾ ಬೈಕ್. ಈ ವಾಹನಗಳ ಒವ್ನರ್‌ಗಳೇ ನನ್ನ ಆಟದ ಲೈನ್ ಅಂಪೈರ್‌ಗಳು. ಇವರೆಲ್ಲರ ಹಾರೈಕೆ(ಹರಕೆ)ಯ ಫಲವೋ ಏನೋ ನಾನು ಮನೆ ಶಿಫ್ಟ್ ಮಾಡಿದೆ.
ಈಗ ನಾನಿರುವ ಪುಟ್ಟ ಹಳ್ಳಿಯಲ್ಲಿ, ಪಕ್ಕದ ಖಾಲಿ ಸೈಟನ್ನೇ ನನ್ನ ಬ್ಯಾಡ್ಮಿಂಟನ್ ಕೋರ್ಟ್ ಆಗಿ ಮಾಡಿರುವೆ. ಆದರೆ ಅಲ್ಲಿ ಮೊದಲಿಂದ ವಾಸಿಸಿರುವ ಈ ಇರುವೆಗಳು
ಏನು ಮಾಡಿದರೂ ಜಾಗ ಬಿಟ್ಟುಕೊಡುತ್ತಿಲ್ಲಾ..
ಶೂನಿಂದ ಅವುಗಳ ಗೂಡನ್ನೆಲ್ಲಾ ಹಾಳು ಮಾಡಿದೆ. ಅವು ಮೇಲೆ ಹತ್ತಿಬಂದು ಕೈಮೈಎಲ್ಲಾ ಕಚ್ಚಿ ಸೇಡು ತೀರಿಸಿಕೊಂಡವು.
ಮೊನ್ನೆ ರಾತ್ರಿ ಮಳೆ ಬಂದು ಕೋರ್ಟು ತುಂಬಾ ನೀರು ನಿಂತಾಗ ಖುಷಿಯಾಯಿತು-ಇರುವೆಗಳೆಲ್ಲಾ ಕೊಚ್ಚಿಹೋಗಿರಬಹುದು ಎಂದು ಬೆಳಗ್ಗೆ ಬಂದು ನೋಡುತ್ತೇನೆ- ಹೊಸಕೋಟೆ ಕಟ್ಟಿ ರೆಡಿಯಾಗಿದ್ದವು.
ಅಂಗಡಿಗೆ ಹೋದವನೇ "ಗ್ಯಾಮಕ್ಸಿನ್" ( http://www.mylot.com/w/discussions/1655208.aspx )ತಂದು ಗೂಡು ತುಂಬಾ ಸುರಿದೆ. ಪಾಪ..ಮೈತುಂಬಾ ಪೌಡರ್ ಮೆತ್ತಿಕೊಂಡು ಸಂಸಾರ ಸಮೇತ ಬೇರೆ ಕಡೆ ಹೊರಟವು.
ಮರುದಿನ ಬೆಳಗ್ಗೆ ನೋಡಿದರೆ..........
ಪೋಲೀಸರು ಇನ್ನಷ್ಟು ಭದ್ರತೆಗೆ ಸಿಆರ್‌ಪಿಏಫ್ ಪಡೆ ಕರೆಸಿದಂತೆ ಹೊರಗಿನಿಂದ ಬೇರೆ ಇರುವೆ ಪಡೆಗಳನ್ನು ಕರೆಸಿಕೊಂಡಿತ್ತು!
ತಲೆಮೇಲೆ ಕೈ ಇಟ್ಟುಕೊಂಡು ಗೂಡಿನ ಬಳಿ ಕುಳಿತು ನೋಡುವಾಗ, ಅವೆಲ್ಲಾ ಇರುವೆಗಳು ಕೈಮೇಲೆತ್ತಿ ಜೋರಾಗಿ ಹೇಳಿದಂತೆ ಅನಿಸಿತು- ಹೋರಾಟಾ..ಹೋರಾಟ...ಎಲ್ಲಿಯವರೆಗೆ ಹೋರಾಟಾ...
ಪ್ರತಿಕ್ರಿಯೆ (14)